S Shorts

Dog Attack | ಬೀದಿ ನಾಯಿಗಳ ಡೆಡ್ಲಿ ಅಟ್ಯಾಕ್: ಮಹಿಳೆಯನ್ನು ಸುತ್ತುವರಿದು ಅಟ್ಟಾಡಿಸಿದ 8 ನಾಯಿಗಳು!

Dog Attack | ಬೀದಿ ನಾಯಿಗಳ ಡೆಡ್ಲಿ ಅಟ್ಯಾಕ್: ಮಹಿಳೆಯನ್ನು ಸುತ್ತುವರಿದು ಅಟ್ಟಾಡಿಸಿದ 8 ನಾಯಿಗಳು!
Author: Meghana Gowda
Posted By: Meghana Gowda
Updated: Mar 3, 2026 | 9:35 AM

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ (street dogs) ಹಾವಳಿ ಮಿತಿಮೀರಿದ್ದು, ಸಾರ್ವಜನಿಕರು ರಸ್ತೆಯಲ್ಲಿ ಓಡಾಡಲು ಭಯಪಡುವಂತಾಗಿದೆ. ಸರ್ಜಾಪುರ ರಸ್ತೆಯ ರಾಯಸಂದ್ರದ ಬಳಿಯ ಅಪಾರ್ಟ್‌ಮೆಂಟ್ ಆವರಣದಲ್ಲಿ ಮಹಿಳೆಯೊಬ್ಬರ ಮೇಲೆ ಎಂಟಕ್ಕೂ ಹೆಚ್ಚು ಬೀದಿ ನಾಯಿಗಳು ಏಕಾಏಕಿ ದಾಳಿ ನಡೆಸಿದ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸರ್ಜಾಪುರದ (Sarjapur) ರಾಯಸಂದ್ರದ ಖಾಸಗಿ ಅಪಾರ್ಟ್‌ಮೆಂಟ್ ಕಾಂಪೌಂಡ್ ಒಳಗೆ ಈ ಘಟನೆ ಸಂಭವಿಸಿದೆ. ಮಾರ್ಚ್ 1ರಂದು ಮಹಿಳೆ ಕಾಂಪೌಂಡ್ ಒಳಗಡೆ ನಡೆದುಕೊಂಡು ಹೋಗುತ್ತಿದ್ದಾಗ, ಅಲ್ಲೇ ಗುಂಪಾಗಿ ನಿಂತಿದ್ದ ಎಂಟು ಬೀದಿ ನಾಯಿಗಳು ಒಮ್ಮೆಗೆ ಆಕೆಯ ಮೇಲೆರಗಿವೆ. ನಾಯಿಗಳ ಹಿಂಡು ಮಹಿಳೆಯನ್ನು ಅಟ್ಟಾಡಿಸಿ ಕಚ್ಚಲು ಮುಂದಾದಾಗ, ಆಕೆಯ ಕಿರುಚಾಟ ಕೇಳಿ ಸ್ಥಳೀಯರು ಕೂಡಲೇ ಓಡಿ ಬಂದು ನಾಯಿಗಳನ್ನು ಓಡಿಸಿದ್ದಾರೆ. ಇದರಿಂದಾಗಿ ಮಹಿಳೆ ದೊಡ್ಡ ಅನಾಹುತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ನಾಯಿಗಳ ದಾಳಿಯಿಂದ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.

ನಗರದಲ್ಲಿ ಬೀದಿ ನಾಯಿಗಳ ಹಾವಳಿ ತಡೆಗಟ್ಟುವಲ್ಲಿ ಜಿಬಿಎ (GBA) ವಿಫಲವಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿಶೇಷವಾಗಿ ಮಕ್ಕಳು ಮತ್ತು ಮಹಿಳೆಯರು ಒಂಟಿಯಾಗಿ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದ್ದಾರೆ.