S Shorts

Big Breaking: ಬೆಳ್ಳಂಬೆಳಿಗ್ಗೆ ಶಾಸಕನ ಬಂಧನ!!

Big Breaking: ಬೆಳ್ಳಂಬೆಳಿಗ್ಗೆ ಶಾಸಕನ ಬಂಧನ!!
Author: Sagaradventure
Posted By: Sagaradventure
Updated: Nov 3, 2025 | 2:33 AM

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ಚುರುಕುಗೊಳ್ಳುತ್ತಿದ್ದಂತೆಯೇ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷದಿಂದ ಕಣಕ್ಕಿಳಿದಿದ್ದ, ಮಾಜಿ ಶಾಸಕ ಅನಂತ್ ಸಿಂಗ್ ಅವರನ್ನು ಕೊಲೆ ಪ್ರಕರಣವೊಂದರಲ್ಲಿ ಪೊಲೀಸರು ಬಂಧಿಸಿದ್ದಾರೆ.

ಜನ ಸುರಾಜ್ ಪಕ್ಷದ ಬೆಂಬಲಿಗ ದುಲಾರ್ ಚಂದ್ ಯಾದವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಂತ್ ಸಿಂಗ್ ಅವರನ್ನು ಇಂದು(ಸೋಮವಾರ) ಬೆಳಿಗ್ಗೆ ಬಿಹಾರ ಪೊಲೀಸರು ಬಂಧಿಸಿದರು.

ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ದೊಂದಿಗೆ ಸಂಬಂಧ ಹೊಂದಿದ್ದ ಗ್ಯಾಂಗ್‌ಸ್ಟರ್ ದುಲಾರ್ ಚಂದ್ ಯಾದವ್ ಗುರುವಾರ ಮೊಕಾಮಾದಲ್ಲಿ ತನ್ನ ಸೋದರಳಿಯ ಮತ್ತು ಜನ ಸುರಾಜ್ ಅಭ್ಯರ್ಥಿ ಪ್ರಿಯದರ್ಶಿ ಪಿಯೂಷ್ ಪರ ಪ್ರಚಾರ ನಡೆಸುತ್ತಿದ್ದಾಗ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದರು.

ಈ ಬಾರಿಯ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ನೇತೃತ್ವದ ಜನ ಸುರಾಜ್ ಪಕ್ಷದಿಂದ ಪಿಯೂಷ್ ಸ್ಪರ್ಧಿಸುತ್ತಿದ್ದಾರೆ.

ಮೊಕಾಮಾ ಕ್ಷೇತ್ರದ ಜೆಡಿ(ಯು) ಅಭ್ಯರ್ಥಿ ಮತ್ತು ಹಾಲಿ ಶಾಸಕಿ ನೀಲಂ ದೇವಿ ಅವರ ಪತಿ ಅನಂತ್ ಸಿಂಗ್ ಅವರನ್ನು ಬರ್ಹ್‌ನಲ್ಲಿರುವ ಅವರ ನಿವಾಸದಿಂದ ಬಂಧಿಸಲಾಗಿದೆ ಎಂದು ಪಾಟ್ನಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕೇಯ ಶರ್ಮಾ ತಿಳಿಸಿದ್ದಾರೆ.

ದುಲಾರ್ ಚಂದ್ ಯಾದವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಂತ್ ಸಿಂಗ್ ಜೊತೆಗೆ ಆತನ ಸಹಚರರಾದ ಮಣಿಕಾಂತ್ ಠಾಕೂರ್ ಮತ್ತು ರಂಜೀತ್ ರಾಮ್‌ರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅನಂತ್ ಸಿಂಗ್ 2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಆದರೆ 2022ರಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಶಿಕ್ಷೆಗೊಳಗಾದ ಕಾರಣ ಅವರನ್ನು ಅನರ್ಹಗೊಳಿಸಲಾಗಿತ್ತು. ನಂತರ ನಡೆದ ಉಪಚುನಾವಣೆಯಲ್ಲಿ ಅವರ ಪತ್ನಿ ನೀಲಂ ದೇವಿ ಜಯಗಳಿಸಿದ್ದರು.