ಚಿಕ್ಕೋಡಿ: ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಫುಡ್ ಪಾಯಿಸನ್ ಘಟನೆ ಸಂಭವಿಸಿದ್ದು, ಸುಮಾರು 12 ಮಂದಿ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ.
ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ (Morarji Desai Residential School) ಈ ಘಟನೆ ಸಂಭವಿಸಿದ್ದು, ವಿದ್ಯಾರ್ಥಿಗಳು ಕಲುಷಿತ ಆಹಾರ ಸೇವನೆಯ ನಂತರ ವಾಂತಿ, ತಲೆ ಸುತ್ತು ಹಾಗೂ ಹೊಟ್ಟೆ ನೋವುಗಳಿಂದ ಬಳಲಿದ್ದಾರೆ. ಅಸ್ವಸ್ಥರಾದ ವಿದ್ಯಾರ್ಥಿಗಳನ್ನು ತಕ್ಷಣವೇ ಚಿಕ್ಕೋಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಮನಾರ್ಹ ಸಂಗತಿಯೆಂದರೆ, ಇದೇ ಶಾಲೆಯಲ್ಲಿ ಸೆಪ್ಟೆಂಬರ್ 12ರಂದು 120 ಮಂದಿ ವಿದ್ಯಾರ್ಥಿಗಳು ಆಹಾರ ವಿಷಬಾಧೆಯಿಂದ ಅಸ್ವಸ್ಥರಾಗಿದ್ದ ಘಟನೆ ಇತ್ತೀಚಿಗಷ್ಟೇ ನಡೆದಿತ್ತು. ಇದೀಗ ಮತ್ತೆ ಇದೇ ರೀತಿಯ ಘಟನೆ ಸಂಭವಿಸಿರುವುದರಿಂದ ಪೋಷಕರಲ್ಲಿ ಆತಂಕಮೂಡಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಮಾಹಿತಿ ಸಂಗ್ರಹಿಸಿದ್ದಾರೆ. ಅಧಿಕಾರಿಗಳು ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಬಗ್ಗೆ ಗಮನ ಹರಿಸಿದ್ದು, ಆಹಾರ ಪೂರೈಕೆ ವ್ಯವಸ್ಥೆಯ ಕುರಿತು ತನಿಖೆ ಪ್ರಾರಂಭಿಸಲಾಗಿದೆ.
ಸ್ಥಳೀಯರು ಶಾಲಾ ಆಡಳಿತದಿಂದ ನಿರ್ಲಕ್ಷ್ಯ ನಡೆದುಕೊಂಡಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಮತ್ತು ವಿದ್ಯಾರ್ಥಿಗಳ ಸುರಕ್ಷತೆಗೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
