S Shorts

ಮಂಗಳೂರಿನಲ್ಲಿ ವಿಮಾನ, ರೈಲ್ವೆ ಕ್ಯಾಟರಿಂಗ್ ಸಂಸ್ಥೆ ಮೇಲೆ FSSAI ದಾಳಿ: ಫ್ರೀಜರ್‌ನಲ್ಲಿ ಒಟ್ಟಿಗೆ ಪತ್ತೆಯಾದ ವೆಜ್-ನಾನ್‌ವೆಜ್!

ಮಂಗಳೂರಿನಲ್ಲಿ ವಿಮಾನ, ರೈಲ್ವೆ ಕ್ಯಾಟರಿಂಗ್ ಸಂಸ್ಥೆ ಮೇಲೆ FSSAI ದಾಳಿ: ಫ್ರೀಜರ್‌ನಲ್ಲಿ ಒಟ್ಟಿಗೆ ಪತ್ತೆಯಾದ ವೆಜ್-ನಾನ್‌ವೆಜ್!
Author: Sagaradventure
Posted By: Sagaradventure
Updated: Aug 21, 2026 | 12:15 PM

ಮಂಗಳೂರಿನಲ್ಲಿ ಆಹಾರ ಸುರಕ್ಷತಾ ಇಲಾಖೆಯ ದಿಢೀರ್ ಕಾರ್ಯಾಚರಣೆ ಮುಂದುವರೆದಿದ್ದು, ವಿಮಾನ ಹಾಗೂ ರೈಲ್ವೆ ಪ್ರಯಾಣಿಕರಿಗೆ ಆಹಾರ ಪೂರೈಸುವ ಪ್ರತಿಷ್ಠಿತ ಕ್ಯಾಟರಿಂಗ್ ಸಂಸ್ಥೆಯೊಂದರ ಮೇಲೆ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಮಂಗಳೂರಿನ ಏರ್‌ಪೋರ್ಟ್ ರಸ್ತೆಯಲ್ಲಿರುವ ಕ್ಯಾಸಿನೋ ಏರ್ ಕ್ಯಾಟರ‍್ಸ್ ಅಂಡ್ ಫ್ಲೈಟ್ ಸರ್ವಿಸಸ್ ಸಂಸ್ಥೆಯ ಮೇಲೆ ಈ ತಪಾಸಣೆ ನಡೆದಿದೆ. ಈ ಸಂಸ್ಥೆಯು ಮಂಗಳೂರಿನಿಂದ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇರಿದಂತೆ ಹಲವು ವಿಮಾನಗಳಿಗೆ ಕ್ಯಾಟರಿಂಗ್ ಮತ್ತು ಆಹಾರ ಸರಬರಾಜು ಮಾಡುವ ಜವಾಬ್ದಾರಿ ಹೊಂದಿದೆ.

ಆಹಾರ ಸುರಕ್ಷತಾ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಹೆಚ್. ಅವರ ನೇತೃತ್ವದಲ್ಲಿ ನಡೆದ ಈ ದಾಳಿಯ ವೇಳೆ, ಆಹಾರ ತಯಾರಿಸುವ ಸ್ಥಳದಲ್ಲಿ ಭಾರೀ ಅವ್ಯವಸ್ಥೆ ಮತ್ತು ಶುಚಿತ್ವದ ತೀವ್ರ ಕೊರತೆ ಇರುವುದು ಪತ್ತೆಯಾಗಿದೆ. ಅತ್ಯಂತ ಆಘಾತಕಾರಿ ವಿಚಾರವೆಂದರೆ, ಸಸ್ಯಾಹಾರಿ ಹಾಗೂ ಮಾಂಸಾಹಾರಿ ಆಹಾರಗಳನ್ನು ಒಂದೇ ಫ್ರೀಜರ್‌ನಲ್ಲಿ ಒಟ್ಟಿಗೆ ಸಂಗ್ರಹಿಸಿಟ್ಟಿರುವುದು ಅಧಿಕಾರಿಗಳ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.

ಸ್ಥಳದಲ್ಲಿದ್ದ ಅಶುಚಿತ್ವ ಹಾಗೂ ನಿಯಮಗಳ ಉಲ್ಲಂಘನೆಯನ್ನು ಕಂಡು ಕೆರಳಿದ ಅಧಿಕಾರಿಗಳು, ಕ್ಯಾಟರಿಂಗ್ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ತಕ್ಷಣವೇ ಆಹಾರ ತಯಾರಿಕಾ ಸ್ಥಳವನ್ನು ಸಂಪೂರ್ಣವಾಗಿ ಶುಚಿಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಲ್ಲದೆ, ಇನ್ನು ಮುಂದೆ ಯಾವುದೇ ಕಾರಣಕ್ಕೂ ಸಸ್ಯಾಹಾರಿ ಮತ್ತು ಮಾಂಸಾಹಾರಿ ಖಾದ್ಯಗಳನ್ನು ಒಂದೇ ಫ್ರೀಜರ್‌ನಲ್ಲಿ ಇಡಬಾರದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. 

ಇದೇ ಕಾರ್ಯಾಚರಣೆಯ ಮುಂದುವರಿದ ಭಾಗವಾಗಿ, ಮಂಗಳೂರು ರೈಲ್ವೆ ನಿಲ್ದಾಣದ ಆವರಣದಲ್ಲಿರುವ ಇತರ ಹೋಟೆಲ್‌ಗಳಲ್ಲೂ ಅಧಿಕಾರಿಗಳು ಆಹಾರದ ಗುಣಮಟ್ಟ ಮತ್ತು ಶುಚಿತ್ವದ ಕುರಿತು ಪರಿಶೀಲನೆ ನಡೆಸಿದ್ದಾರೆ.