ಬೆಂಗಳೂರಿನಲ್ಲಿ ಐಷಾರಾಮಿ ಫ್ಲ್ಯಾಟ್ ಹೊಂದುವುದು ಲಕ್ಷಾಂತರ ಜನರ ಕನಸು. ಆದರೆ 24 ವರ್ಷದ ಯುವ ಉದ್ಯಮಿ ಆಕಾಶ್ ನಾರಾಯಣ್ ಅವರಿಗೆ ಎಲೆಕ್ಟ್ರಾನಿಕ್ ಸಿಟಿ ಬಳಿಯ ‘ಕಾಸಾಗ್ರ್ಯಾಂಡ್ ವೈವಸಿಟಿ’ಯಲ್ಲಿ (Casagrand Vivacity) ಖರೀದಿಸಿರುವ ₹1.8 ಕೋಟಿ ಮೌಲ್ಯದ ಅಪಾರ್ಟ್‌ಮೆಂಟ್, ವರ್ಷಗಳ ಕಠಿಣ ಶ್ರಮ ಹಾಗೂ ಅನಿಶ್ಚಿತತೆಯನ್ನು ಮೆಟ್ಟಿ ನಿಂತು ಸಾಧಿಸಿದ ಯಶಸ್ಸಿನ ಸಂಕೇತವಾಗಿದೆ. ಪ್ರಸ್ತುತ ವಾರ್ಷಿಕ ₹13 ಕೋಟಿ ಬೃಹತ್ ವಹಿವಾಟು ನಡೆಸುತ್ತಿರುವ ‘ಲೀಗಲಿಟ್’ (Legalit) ಎಂಬ ಲೀಗಲ್-ಟೆಕ್ ಸ್ಟಾರ್ಟ್‌ಅಪ್‌ನ ಸಂಸ್ಥಾಪಕರಾಗಿರುವ ಆಕಾಶ್, ಈ ದೊಡ್ಡ ಮೈಲಿಗಲ್ಲಿನ ಶ್ರೇಯಸ್ಸನ್ನು ತಮ್ಮ ತಾಯಿ ಹಾಗೂ ಆರಂಭಿಕ ತಂಡಕ್ಕೆ ಅರ್ಪಿಸಿದ್ದಾರೆ. ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಈ ಫ್ಲ್ಯಾಟ್ 2027ರ ಏಪ್ರಿಲ್ ವೇಳೆಗೆ ಹಸ್ತಾಂತರವಾಗುವ ನಿರೀಕ್ಷೆಯಿದೆ.
ಕೌಟುಂಬಿಕ ಸವಾಲುಗಳು ಹಾಗೂ ಅನಿಶ್ಚಿತತೆಯ ದಿನಗಳನ್ನು ನೆನಪಿಸಿಕೊಂಡ ಆಕಾಶ್, “ಫ್ಲ್ಯಾಟ್‌ನ ಕೀಲಿ ಕೈ ಸಿಕ್ಕಾಗ ಮನೆ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದು ನನ್ನ ಮೊದಲ ಉದ್ದೇಶವಾಗಿರಲಿಲ್ಲ. ಏನೂ ಸರಿಹೋಗದಿದ್ದ ಕಷ್ಟದ ದಿನಗಳು ನನ್ನ ನೆನಪಿಗೆ ಬಂದವು. ಇಂತಹದೊಂದು ಸ್ವಂತ ಮನೆ ಹೊಂದುವುದು ನನ್ನ ಪಾಲಿಗೆ ತುತ್ತತುದಿಯ ಕನಸಾಗಿತ್ತು. ಇಂದು ಈ ಮನೆ ಒಬ್ಬ ವ್ಯಕ್ತಿಯ ಸಾಧನೆಯಂತೆ ಕಾಣಬಹುದು, ಆದರೆ ಇದರ ಹಿಂದೆ ನನ್ನ ತಾಯಿಯ ನಿರಂತರ ಪ್ರೋತ್ಸಾಹ ಮತ್ತು ನನ್ನನ್ನು ನಂಬಿದ ಆರಂಭಿಕ ತಂಡದ ಕಠಿಣ ಶ್ರಮವಿದೆ. ಇಷ್ಟೆಲ್ಲ ಬೆಂಬಲ ಸಿಕ್ಕಾಗ ನಾನು ಒಬ್ಬನೇ ಸಂಭ್ರಮಿಸುವುದು ಸರಿಯಲ್ಲ ಎನಿಸಿತು” ಎಂದು ಭಾವುಕರಾಗಿ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, “24ರ ಹರೆಯದಲ್ಲಿ ನನ್ನ ಮೊದಲ ಮನೆ ಖರೀದಿಸಿದ್ದೇನೆ. ಈ ಮೈಲಿಗಲ್ಲು ಕೇವಲ ನನ್ನದಲ್ಲ, ನನ್ನ ಕುಟುಂಬ, ಮಾರ್ಗದರ್ಶಕರು, ಸ್ನೇಹಿತರು ಹಾಗೂ ನನ್ನ ತಂಡದ್ದು. ಪ್ರತಿಯೊಂದು ತಡರಾತ್ರಿಯ ಶ್ರಮ, ತ್ಯಾಗಗಳು ನನ್ನನ್ನು ಇಲ್ಲಿಯವರೆಗೆ ತಂದುನಿಲ್ಲಿಸಿವೆ. ಇದು ಕೇವಲ ಆರಂಭವಷ್ಟೇ, ನಾವು ಸಾಗಬೇಕಾದ ಹಾದಿ ಇನ್ನೂ ಸುದೀರ್ಘವಾಗಿದೆ” ಎಂದಿದ್ದಾರೆ. ಸೇಂಟ್ ಜೋಸೆಫ್ಸ್ ಲಾ ಕಾಲೇಜಿನಲ್ಲಿ ಕಾನೂನು ಹಾಗೂ ಮಣಿಪಾಲ್ ಯುನಿವರ್ಸಿಟಿ ಜೈಪುರದಲ್ಲಿ ಡೇಟಾ ಸೈನ್ಸ್ ವ್ಯಾಸಂಗ ಮಾಡಿದ್ದ ಆಕಾಶ್, 2023ರಲ್ಲಿ ವಕೀಲರಿಗಾಗಿ ‘ಲೀಗಲಿಟ್’ ವ್ಯವಸ್ಥೆಯನ್ನು ಆರಂಭಿಸಿದ್ದರು. ಇವರ ಈ ಸ್ಪೂರ್ತಿದಾಯಕ ಯಶೋಗಾಥೆಗೆ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ.
