S Shorts

ಪ್ರಿಯತಮನಿಗೆ ಗಿಫ್ಟ್ ನೀಡಲು 2 ಲಕ್ಷ ರೂ. ಬೆಲೆಯ ವಾಚ್ ಕಳವು ಮಾಡಿದ ಯುವತಿ

ಪ್ರಿಯತಮನಿಗೆ ಗಿಫ್ಟ್ ನೀಡಲು 2 ಲಕ್ಷ ರೂ. ಬೆಲೆಯ ವಾಚ್ ಕಳವು ಮಾಡಿದ ಯುವತಿ
Author: Savina Naik
Posted By: Savina Naik
Updated: Apr 16, 2026 | 11:29 AM

ಹೈದರಾಬಾದ್: ಪ್ರಿಯಕರನಿಗೆ ದುಬಾರಿ ಉಡುಗೊರೆ ನೀಡಬೇಕೆಂಬ ಹಂಬಲದಿಂದ ಐಷಾರಾಮಿ ವಾಚ್ ಕಳ್ಳತನ ಮಾಡಿದ 26 ವರ್ಷದ ಯುವತಿಯನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

ಖಮ್ಮಂ ಜಿಲ್ಲೆಯ ರಾಜೀವ್ ಗಂಜ್ ಮೂಲದ  ಯುವತಿ ಇತ್ತೀಚೆಗೆ ಕೆಲಸದ ನಿಮಿತ್ತ ಹೈದರಾಬಾದ್‌ಗೆ ಬಂದಿದ್ದಳು. ಜೂಬ್ಲಿಹಿಲ್ಸ್ ರೋಡ್‌ನಲ್ಲಿರುವ ಪ್ರಸಿದ್ಧ ವಾಚ್ ಶೋರೂಮ್‌ಗೆ ಭೇಟಿ ನೀಡಿದ ಈಕೆ, ತನ್ನ ಪ್ರಿಯತಮನಿಗೆ ಉಡುಗೊರೆ ನೀಡಲು ದುಬಾರಿ ವಾಚ್‌ಗಳನ್ನು ತೋರಿಸುವಂತೆ ಸಿಬ್ಬಂದಿಯನ್ನು ಕೇಳಿದ್ದಾಳೆ.

ಸಿಬ್ಬಂದಿಯ ಗಮನ ಬೇರೆಡೆ ಇದ್ದಾಗ, ಸುಮಾರು ತಲಾ 1 ಲಕ್ಷ ರೂಪಾಯಿ ಮೌಲ್ಯದ  ‘ಟಿಸಾಟ್’ (Tissot) ಬ್ರಾಂಡ್‌ನ ಎರಡು ವಾಚ್‌ಗಳನ್ನು ಚಾಕಚಕ್ಯತೆಯಿಂದ ಕದ್ದು ತನ್ನ ಬ್ಯಾಗ್‌ನಲ್ಲಿ ಹಾಕಿಕೊಂಡಿದ್ದಾಳೆ. ನಂತರ ವಾಚ್‌ಗಳು ಇಷ್ಟವಾಗಲಿಲ್ಲ ಎಂದು ಹೇಳಿ ಅಲ್ಲಿಂದ ಜಾರಿಕೊಂಡಿದ್ದಾಳೆ.

ಯುವತಿ ಹೋದ ನಂತರ ಸಿಬ್ಬಂದಿ ಸ್ಟಾಕ್ ಪರಿಶೀಲಿಸಿದಾಗ ವಾಚ್‌ಗಳು ನಾಪತ್ತೆಯಾಗಿರುವುದು ಕಂಡುಬಂದಿದೆ. ತಕ್ಷಣವೇ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಯುವತಿಯ ಕೈಚಳಕ ಬಯಲಾಗಿದೆ. ಶೋರೂಮ್ ಮಾಲೀಕರು ನೀಡಿದ ದೂರಿನ ಮೇರೆಗೆ ಜೂಬ್ಲಿಹಿಲ್ಸ್ ಪೊಲೀಸರು ಕಾರ್ಯಾಚರಣೆ ನಡೆಸಿ ಈಕೆಯನ್ನು ಬಂಧಿಸಿದ್ದಾರೆ.

ಪೊಲೀಸರ ವಿಚಾರಣೆಯ ವೇಳೆ, ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿರುವ ತನ್ನ ಪ್ರಿಯತಮ ಕೊತ್ತ ಮುರಳೀಧರ್ ಗೌಡ್ (29) ಎಂಬಾತನಿಗೆ ನೀಡಲೆಂದೇ ಈ ಕಳ್ಳತನ ಮಾಡಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ಕಳವು ಮಾಡಿದ ವಾಚ್‌ಗಳನ್ನು ಆತನಿಗೆ ನೀಡಿದ್ದರಿಂದ, ಪೊಲೀಸರು ಮುರಳೀಧರ್ ಗೌಡ್‌ನನ್ನೂ ಬಂಧಿಸಿ, ಆತನಿಂದ ವಾಚ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರ ಮೇಲೂ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.

ದುಬಾರಿ ಜೀವನದ ಆಸೆ ಮತ್ತು ಅಡ್ಡ ಹಾದಿಯಲ್ಲಿ ಪ್ರೀತಿಯನ್ನು ಉಳಿಸಿಕೊಳ್ಳಲು ಹೋದ ಯುವತಿ ಈಗ ಜೈಲು ಪಾಲಾಗಿದ್ದಾಳೆ.