S Shorts

5 ಎಕರೆ ಜಾಗ ಕೊಡಿ, ‘ನಿಖಿಲ್ ಲೇಔಟ್’ ಅಂತ ಹೆಸರಿಡ್ತೀವಿ: ಶಾಸಕ ಹೆಚ್.ಸಿ. ಬಾಲಕೃಷ್ಣ ವ್ಯಂಗ್ಯ!

5 ಎಕರೆ ಜಾಗ ಕೊಡಿ, ‘ನಿಖಿಲ್ ಲೇಔಟ್’ ಅಂತ ಹೆಸರಿಡ್ತೀವಿ: ಶಾಸಕ ಹೆಚ್.ಸಿ. ಬಾಲಕೃಷ್ಣ ವ್ಯಂಗ್ಯ!
Author: Meghana Gowda
Posted By: Meghana Gowda
Updated: Jun 24, 2026 | 11:14 AM

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಬಿಡದಿ ಟೌನ್‌ಶಿಪ್ ಯೋಜನೆ (Bidadi Township Project) ಈಗ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಈ ಕುರಿತು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ (MLA HC Balakrishna) ಕೌಂಟರ್ ಕೊಟ್ಟಿದ್ದರೆ, ಇತ್ತ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Union Minister Shobha Karandlaje) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಿಖಿಲ್‌ಗೆ ಬಾಲಕೃಷ್ಣ ವ್ಯಂಗ್ಯದ ಸವಾಲು: ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಹೆಚ್.ಸಿ. ಬಾಲಕೃಷ್ಣ, “ಟೌನ್‌ಶಿಪ್ ಯೋಜನೆ ಕೈಬಿಟ್ಟರೆ ಜಮೀನು ಕೊಡುವುದಾಗಿ ಹೇಳುತ್ತಿದ್ದಾರೆ. ಹಾಗಿದ್ದರೆ ದಯವಿಟ್ಟು ನಿಖಿಲ್ ಕುಮಾರಸ್ವಾಮಿ ಅವರು ತಮ್ಮಲ್ಲಿರುವ 5 ಎಕರೆ ಜಾಗವನ್ನು ರೈತರಿಗಾಗಿ ಬಿಟ್ಟುಕೊಡಲಿ. ಆ ಜಾಗವನ್ನು ಪಡೆದು ನಾವು ರೈತ ಹೋರಾಟಗಾರರಿಗೆ ಸೈಟ್ ಹಂಚೋಣ. ಅಷ್ಟೇ ಅಲ್ಲದೆ, ಇಡೀ ಏರಿಯಾ ಮತ್ತು ಲೇಔಟ್‌ಗೆ ‘ನಿಖಿಲ್ ಕುಮಾರಸ್ವಾಮಿ ಲೇಔಟ್’ (Nikhil Kumaraswamy Layout) ಎಂದೇ ಹೆಸರಿಡೋಣ” ಎಂದು ಕಟುವಾಗಿ ವ್ಯಂಗ್ಯವಾಡಿದ್ದಾರೆ.

ರಿಯಲ್ ಎಸ್ಟೇಟ್ ದಂಧೆ ಎಂದ ಶೋಭಾ ಕರಂದ್ಲಾಜೆ: ಇನ್ನೊಂದೆಡೆ, ಇದೇ ವಿಷಯವಾಗಿ ಸರ್ಕಾರದ ವಿರುದ್ಧ ಕಿಡಿಕಾರಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, “ಸರ್ಕಾರ ಕೇವಲ ರಿಯಲ್ ಎಸ್ಟೇಟ್ (Real Estate Business) ನಡೆಸಲು ಹೊಸ ಟೌನ್‌ಶಿಪ್ ಮಾಡಲು ಹೊರಟಿದೆ. ಬೆಂಗಳೂರನ್ನು ಮತ್ತಷ್ಟು ಬೆಳೆಸಿ ಸಮಸ್ಯೆಗಳನ್ನು ಸೃಷ್ಟಿಸಬೇಡಿ. ಈಗಾಗಲೇ ನಿರ್ಮಿಸಲಾಗಿರುವ ಡಾ. ಶಿವರಾಮ ಕಾರಂತ ಬಡಾವಣೆ ಹಾಗೂ ನಾಡಪ್ರಭು ಕೆಂಪೇಗೌಡ ಬಡಾವಣೆಗಳಲ್ಲಿ (Kempegowda Layout) ಇಂದಿಗೂ ಮೂಲಸೌಕರ್ಯಗಳನ್ನು ಕಲ್ಪಿಸಿಕೊಟ್ಟಿಲ್ಲ. ಮೊದಲು ಈಗಿರುವ ಬಡಾವಣೆಗಳಿಗೆ ಮೂಲಸೌಕರ್ಯ ಕೊಡಿ, ಆಮೇಲೆ ಹೊಸ ಯೋಜನೆಗಳ ಬಗ್ಗೆ ಯೋಚಿಸಿ” ಎಂದು ವಾಗ್ದಾಳಿ ನಡೆಸಿದ್ದಾರೆ.