ಮಡಿಕೇರಿ: ಕಾಫಿ ನಾಡು ಕೊಡಗು ಜಿಲ್ಲೆಯ ಮಡಿಕೇರಿ (Madikeri) ಹಾಗೂ ಅದರ ಸುತ್ತಮುತ್ತಲಿನ ಹಲವು ಪ್ರಮುಖ ಪ್ರದೇಶಗಳಲ್ಲಿ ಇಂದು ವರುಣ ದಿಢೀರ್ ಪ್ರತ್ಯಕ್ಷನಾಗಿದ್ದು, ಕಳೆದ ಒಂದು ಗಂಟೆಯಿಂದ ಜಿಟಿಜಿಟಿ ಮಳೆ (Rain) ಸುರಿಯುತ್ತಿದೆ. ಮಡಿಕೇರಿ ನಗರ ಸೇರಿದಂತೆ ಗಾಳಿಬೀಡು, ಸುಂಟಿಕೊಪ್ಪ, ಮದೆನಾಡು ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿರುವ ವರದಿಯಾಗಿದೆ.
ರೈತರಲ್ಲಿ ಮೂಡಿದ ಹರ್ಷ: ಜೂನ್ ತಿಂಗಳ ಆರಂಭದ ದಿನಗಳಿಂದಲೂ ಕೊಡಗಿನಲ್ಲಿ ಮುಂಗಾರು ಮಳೆ (Monsoon Rain) ತೀವ್ರವಾಗಿ ದುರ್ಬಲಗೊಂಡಿತ್ತು. ಸಕಾಲಕ್ಕೆ ಮಳೆಯಾಗದ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಆರ್ಥಿಕ ಮೂಲವಾದ ಕೃಷಿ ಚಟುವಟಿಕೆಗಳು ಕುಂಠಿತಗೊಂಡು ರೈತಾಪಿ ವರ್ಗದ ಜನರಲ್ಲಿ ಆತಂಕ ಮೂಡಿಸಿತ್ತು. ಆದರೆ, ಇಂದು ದಿಢೀರನೆ ಆರಂಭವಾಗಿರುವ ಈ ಮಳೆಯು ರೈತರ ಕಂಗಾಲಾಗಿದ್ದ ಮುಖದಲ್ಲಿ ಮಂದಹಾಸ ಮೂಡಿಸುವಂತೆ ಮಾಡಿದೆ. ಒಣಗುತ್ತಿದ್ದ ಭೂಮಿಗೆ ಮಳೆ ಹನಿಗಳು ಬಿದ್ದಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಮತ್ತೆ ಜೀವ ಬಂದಂತಾಗಿದೆ.
ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ ಸುರಿಯಲಾರಂಭಿಸಿದ ಮಳೆಯಿಂದಾಗಿ ರಸ್ತೆಯಲ್ಲಿದ್ದ ಸಾರ್ವಜನಿಕರು ಹಾಗೂ ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು (Two-Wheeler Riders) ಆಶ್ರಯಕ್ಕಾಗಿ ಎಲ್ಲೆಂದರಲ್ಲಿ ಓಡಾಡಿ ಪರದಾಡುವಂತಾಯಿತು. ಮಳೆಯ ತೀವ್ರತೆ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳು ಮತ್ತಷ್ಟು ಬಿರುಸುಕೊಳ್ಳಲಿವೆ ಎಂದು ಸ್ಥಳೀಯರು ಆಶಿಸಿದ್ದಾರೆ.
