ಬೆಂಗಳೂರು: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬೇಸಿಗೆಯ ಬಿಸಿಲಿನ ತಾಪಮಾನ ದಿನೇ ದಿನೇ ಏರುತ್ತಿರುವ ಹಿನ್ನೆಲೆಯಲ್ಲಿ, ಅಲ್ಲಿನ ಸರ್ಕಾರಿ ನೌಕರರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು ಮಹತ್ವದ ಆದೇಶವೊಂದನ್ನು ಹೊರಡಿಸಿದೆ.
ಬೆಳಗಾವಿ ಮತ್ತು ಕಲಬುರಗಿ ವಿಭಾಗದ ಜಿಲ್ಲೆಗಳಲ್ಲಿ ಏಪ್ರಿಲ್ ಮತ್ತು ಮೇ ತಿಂಗಳ ಅವಧಿಗೆ ಅನ್ವಯವಾಗುವಂತೆ ಸರ್ಕಾರಿ ಕಚೇರಿಗಳ ಕೆಲಸದ ವೇಳೆಯನ್ನು ಬದಲಾಯಿಸಲಾಗಿದೆ.

ಬೇಸಿಗೆಯ ಪ್ರಖರ ಬಿಸಿಲಿನಿಂದಾಗಿ ನೌಕರರು ಎದುರಿಸುತ್ತಿರುವ ತೊಂದರೆಗಳನ್ನು ಪರಿಗಣಿಸಿ, ಮಾನವೀಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೊಸ ಆದೇಶದಂತೆ ಪ್ರಸ್ತುತ ಜಾರಿಯಲ್ಲಿರುವ ಕಚೇರಿ ಸಮಯ ಈ 2026ರ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಮಾತ್ರ ಬೆಳಿಗ್ಗೆ 8.00 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಇರುತ್ತದೆ. ಈ ಆದೇಶವು ಪ್ರಮುಖವಾಗಿ ಬೆಳಗಾವಿ, ವಿಜಯಪುರ ಬಾಗಲಕೋಟೆ ,ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಿಗೆ ಅನ್ವಯವಾಗುತ್ತದೆ.
ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತುರ್ತು ಸಂದರ್ಭದಲ್ಲಿ ಕೆಲಸ ನಿರ್ವಹಿಸಲು ಸೂಚಿಸಿದರೆ, ನೌಕರರು ಸಮಯದ ಮಿತಿಯಿಲ್ಲದೆ ಕರ್ತವ್ಯಕ್ಕೆ ಹಾಜರಿರಬೇಕಾಗುತ್ತದೆ.
ಕಚೇರಿ ಸಮಯ ಬದಲಾದರೂ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೌಕರರು ತಮ್ಮ ಕರ್ತವ್ಯವನ್ನು ನಿರ್ವಹಿಸತಕ್ಕದ್ದು ಎಂದು ಸೂಚಿಸಲಾಗಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ವಿವಿಧ ನೌಕರರ ಒಕ್ಕೂಟಗಳು ನೀಡಿದ್ದ ಮನವಿಯನ್ನು ಪುರಸ್ಕರಿಸಿ ಸರ್ಕಾರವು ಈ ಆದೇಶ ಹೊರಡಿಸಿದೆ. ಇದರಿಂದಾಗಿ ಬಿಸಿಲ ನಾಡಿನ ನೌಕರರಿಗೆ ಸ್ವಲ್ಪ ಮಟ್ಟಿನ ನೆಮ್ಮದಿ ಸಿಕ್ಕಂತಾಗಿದೆ.
