S Shorts

Cinema ಟಿಕೆಟ್ ಮೇಲೆ ಶೇ.2 ರಷ್ಟು ಸೆಸ್ ವಿಧಿಸಿದ ಸರ್ಕಾರ: ಸೆಪ್ಟೆಂಬರ್ 30 ರಿಂದ ಜಾರಿ, ಟಿಕೆಟ್ ದರ ಮತ್ತಷ್ಟು ದುಬಾರಿ!

Cinema ಟಿಕೆಟ್ ಮೇಲೆ ಶೇ.2 ರಷ್ಟು ಸೆಸ್ ವಿಧಿಸಿದ ಸರ್ಕಾರ: ಸೆಪ್ಟೆಂಬರ್ 30 ರಿಂದ ಜಾರಿ, ಟಿಕೆಟ್ ದರ ಮತ್ತಷ್ಟು ದುಬಾರಿ!
Author: Sagaradventure
Posted By: Sagaradventure
Updated: Sep 18, 2026 | 11:52 AM

ರಾಜ್ಯದಲ್ಲಿ ಸಿನಿಮಾ ವೀಕ್ಷಕರಿಗೆ ಕರ್ನಾಟಕ ಸರ್ಕಾರವು ಬಿಗ್ ಶಾಕ್ ನೀಡಿದ್ದು, ಸಿನಿಮಾ ಟಿಕೆಟ್‌ಗಳ ಮೇಲೆ ಶೇಕಡಾ 2 ರಷ್ಟು ಸೆಸ್ (ಉಪಕರ) ವಿಧಿಸಲು ತೀರ್ಮಾನಿಸಿದೆ. ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಅಧಿನಿಯಮ 2024 ರ ಅಡಿಯಲ್ಲಿ ಈ ಹೊಸ ನಿಯಮವು ಇದೇ ಸೆಪ್ಟೆಂಬರ್ 30 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಈ ಕುರಿತು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲಾ ಸಿನಿಮಾ ಮಂದಿರಗಳ ಟಿಕೆಟ್ ದರಗಳು ಮತ್ತಷ್ಟು ದುಬಾರಿಯಾಗಲಿವೆ. ಸರ್ಕಾರದ ಲೆಕ್ಕಾಚಾರದಂತೆ, 200 ರೂಪಾಯಿ ಮುಖಬೆಲೆಯ ಟಿಕೆಟ್ ಖರೀದಿಸಿದರೆ ವೀಕ್ಷಕರು ಹೆಚ್ಚುವರಿಯಾಗಿ 4 ರೂಪಾಯಿ ಸೆಸ್ ಪಾವತಿಸಬೇಕಾಗುತ್ತದೆ.

ಸಿನಿಮಾ ಮತ್ತು ಸಾಂಸ್ಕೃತಿಕ ರಂಗದ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರವು 2024 ರಲ್ಲಿ ಈ ವಿಶೇಷ ವಿಧೇಯಕವನ್ನು ಮಂಡಿಸಿತ್ತು. 2024 ರ ಸೆಪ್ಟೆಂಬರ್ 23 ರಂದು ಕರ್ನಾಟಕದ ರಾಜ್ಯಪಾಲರು ಈ ಕಾಯ್ದೆಗೆ ಅಧಿಕೃತವಾಗಿ ಅಂಕಿತ ಹಾಕಿದ್ದರು ಹಾಗೂ ಮರುದಿನವೇ ಇದನ್ನು ಸರ್ಕಾರದ ವಿಶೇಷ ರಾಜ್ಯಪತ್ರದಲ್ಲಿ (ಗೆಜೆಟ್) ಪ್ರಕಟಿಸಲಾಗಿತ್ತು. 

ಇದೀಗ ಸರಿಯಾಗಿ 2 ವರ್ಷಗಳ ಬಳಿಕ ಈ ಕಾಯ್ದೆಯನ್ನು ಜಾರಿಗೆ ತರಲು ಸರ್ಕಾರ ಆದೇಶ ಹೊರಡಿಸಿದೆ. ಈ ಹೊಸ ಸೆಸ್ ಮೂಲಕ ಸಂಗ್ರಹವಾಗುವ ಹಣವನ್ನು ಸಂಪೂರ್ಣವಾಗಿ ಸಿನಿಮಾ ಕಾರ್ಮಿಕರ ಮಂಡಳಿಗೆ ವರ್ಗಾಯಿಸಿ, ಅವರ ಕ್ಷೇಮಾಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಗಳಿಗಾಗಿ ಮಾತ್ರ ಬಳಸಲಾಗುವುದು ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.

ಈ ಅಧಿನಿಯಮದ ಪ್ರಕಾರ, ಸಿನಿಮಾ ಟಿಕೆಟ್‌ಗಳು, ವಂತಿಗೆ ಶುಲ್ಕಗಳು ಹಾಗೂ ಸಂಬಂಧಿತ ಸಂಸ್ಥೆಗಳಿಂದ ಬರುವ ಎಲ್ಲಾ ಆದಾಯದ ಮೇಲೆ ಕನಿಷ್ಠ ಶೇಕಡಾ 1 ರಿಂದ ಗರಿಷ್ಠ ಶೇಕಡಾ 2 ರವರೆಗೆ ಸೆಸ್ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಉಪಕರ ಲೆಕ್ಕಾಚಾರ ಮಾಡುವಾಗ ಸಿನಿಮಾ ಟಿಕೆಟ್‌ನ ಮೂಲ ದರವನ್ನು ಮಾತ್ರ ಪರಿಗಣಿಸಬೇಕು ಮತ್ತು ಅದರಲ್ಲಿ ಇತರ ಯಾವುದೇ ತೆರಿಗೆಗಳು ಸೇರಿರಬಾರದು ಎಂದು ನಿಯಮದಲ್ಲಿ ಉಲ್ಲೇಖಿಸಲಾಗಿದೆ. 

ಪ್ರತಿ 3 ವರ್ಷಗಳಿಗೊಮ್ಮೆ ಈ ದರವನ್ನು ಅಧಿಸೂಚನೆ ಮೂಲಕ ಪರಿಷ್ಕರಿಸುವ ಅಧಿಕಾರವೂ ಸರ್ಕಾರಕ್ಕಿದೆ. ಏತನ್ಮಧ್ಯೆ, ಸರ್ಕಾರದ ಈ ಶೇಕಡಾ 2 ರ ಸೆಸ್ ನಿರ್ಧಾರಕ್ಕೆ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದರಿಂದ ಪ್ರೇಕ್ಷಕರಿಗೆ ಆರ್ಥಿಕ ಹೊರೆಯಾಗಲಿದ್ದು ಚಿತ್ರಮಂದಿರಗಳತ್ತ ಬರುವವರ ಸಂಖ್ಯೆ ಕಡಿಮೆಯಾಗುವ ಆತಂಕವನ್ನು ವ್ಯಕ್ತಪಡಿಸಿದೆ.