ನವದೆಹಲಿ: ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದ (Israel-Iran conflict) ಭೀಕರತೆಯ ಕುರಿತು ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಕವರೇಜ್‌ಗೆ ಸಂಬಂಧಿಸಿದಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (Ministry of Information and Broadcasting) ಮಹತ್ವದ ಹೆಜ್ಜೆಯಿಟ್ಟಿದೆ. ಎಲ್ಲಾ ಸುದ್ದಿವಾಹಿನಿಗಳ (News Channels) ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (TRP) ವರದಿ ಮಾಡುವುದನ್ನು ಮುಂದಿನ ನಾಲ್ಕು ವಾರಗಳ ಕಾಲ (ಒಂದು ತಿಂಗಳು) ತಕ್ಷಣವೇ ಸ್ಥಗಿತಗೊಳಿಸುವಂತೆ ‘ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್’ಗೆ (BARC) ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಈ ಆದೇಶವು ಮುಂದಿನ ನಾಲ್ಕು ವಾರಗಳು ಅಥವಾ ಮುಂದಿನ ಅಧಿಕೃತ ಸೂಚನೆ ಬರುವವರೆಗೆ (ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ) ಜಾರಿಯಲ್ಲಿರಲಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಟಿಆರ್‌ಪಿ ತಡೆಹಿಡಿಯಲು ಕಾರಣವೇನು?
ಟಿಆರ್‌ಪಿಗಾಗಿ ಕೆಲವು ಸುದ್ದಿವಾಹಿನಿಗಳು ಇರಾನ್-ಇಸ್ರೇಲ್ ಯುದ್ಧದ ಬಗ್ಗೆ “ಅನಗತ್ಯ ಸಂಚಲನ (Unwarranted sensationalism) ಮತ್ತು ಊಹಾಪೋಹದ ವಿಷಯಗಳನ್ನು” ಪ್ರಸಾರ ಮಾಡುತ್ತಿವೆ ಎಂದು ಸಚಿವಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಇಂತಹ ಕವರೇಜ್‌ಗಳು ಸಾರ್ವಜನಿಕರಲ್ಲಿ ಭೀತಿ (Panic) ಸೃಷ್ಟಿಸುವ ಅಪಾಯವಿದೆ.
ವಿಶೇಷವಾಗಿ ಯುದ್ಧಪೀಡಿತ ಪ್ರದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರು, ಹಾಗೂ ಅಲ್ಲಿ ತಮ್ಮ ಕುಟುಂಬಸ್ಥರು, ಸ್ನೇಹಿತರನ್ನು ಹೊಂದಿರುವ ಜನರಲ್ಲಿ ಈ ರೀತಿಯ ಪ್ರಸಾರಗಳು ತೀವ್ರ ಆತಂಕ ಮೂಡಿಸುತ್ತವೆ ಎಂದು ಸಚಿವಾಲಯ ಕಳವಳ ವ್ಯಕ್ತಪಡಿಸಿದೆ.
ಮಾರ್ಗಸೂಚಿಗಳ ಅಡಿ ಬಿಗಿ ಕ್ರಮ
ಜನವರಿ 16, 2014 ರಂದು ರೂಪಿಸಲಾದ ‘ಭಾರತದಲ್ಲಿನ ಟೆಲಿವಿಷನ್ ರೇಟಿಂಗ್ ಏಜೆನ್ಸಿಗಳ ನೀತಿ ಮಾರ್ಗಸೂಚಿಗಳ’ ಷರತ್ತು 24.2 ರ (Clause 24.2) ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಈ ನಿಯಮಾವಳಿಯ ಪ್ರಕಾರ, ಕಾಲಕಾಲಕ್ಕೆ ಸಚಿವಾಲಯವು ನೀಡುವ ಆದೇಶಗಳು, ನಿಯಮಗಳು ಮತ್ತು ನಿರ್ದೇಶನಗಳನ್ನು ರೇಟಿಂಗ್ ಏಜೆನ್ಸಿಗಳು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಇದೇ ಮಾರ್ಗಸೂಚಿಗಳ ಅಡಿಯಲ್ಲಿ ನೋಂದಾಯಿತವಾಗಿರುವ ಟೆಲಿವಿಷನ್ ರೇಟಿಂಗ್ ಏಜೆನ್ಸಿ BARC ಗೆ ಇದೀಗ ತಕ್ಷಣದಿಂದಲೇ ಜಾರಿಗೆ ಬರುವಂತೆ ನ್ಯೂಸ್ ಚಾನೆಲ್‌ಗಳ ಟಿಆರ್‌ಪಿ ಪ್ರಕಟಿಸುವುದನ್ನು ತಡೆಹಿಡಿಯಲು ಸೂಚಿಸಲಾಗಿದೆ.
