S Shorts

ಹಳಿಯಾಳದಲ್ಲಿ ‘ಮಂತ್ಲಿ’ ಲಂಚದ ಆಡಿಯೋ ವೈರಲ್: ಮೂವರು PSI ಅಮಾನತು

ಹಳಿಯಾಳದಲ್ಲಿ ‘ಮಂತ್ಲಿ’ ಲಂಚದ ಆಡಿಯೋ ವೈರಲ್: ಮೂವರು PSI ಅಮಾನತು
Author: Sagaradventure
Posted By: Sagaradventure
Updated: Aug 31, 2026 | 11:13 AM

ವರ್ಗಾವಣೆಗಾಗಿ ಕಮಿಷನ್ ಹಾಗೂ ಹಿರಿಯ ಅಧಿಕಾರಿಗಳಿಗೆ ಪ್ರತಿ ತಿಂಗಳು ‘ಮಂತ್ಲಿ’ ಲಂಚ ನೀಡುವ ಕುರಿತು ಮಾತನಾಡಿದ್ದ ಎನ್ನಲಾದ ಆಡಿಯೋ ವೈರಲ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಮೂವರು ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳನ್ನು ಅಮಾನತುಗೊಳಿಸಲಾಗಿದೆ.

ಹಳಿಯಾಳ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ PSI ಕಿರಣ್ ಪಾಟೀಲ್, ಕ್ರೈಂ PSI ಕೃಷ್ಣ ಹಾಗೂ ಈ ಹಿಂದೆ ಹಳಿಯಾಳದಲ್ಲಿ PSI ಆಗಿದ್ದ ವಿನೋದ್ ರೆಡ್ಡಿ ಅಮಾನತುಗೊಂಡ ಅಧಿಕಾರಿಗಳು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ಅಮಾನತು ಆದೇಶ ಹೊರಡಿಸಿದ್ದಾರೆ.

ಇತ್ತೀಚೆಗೆ ಜೆಡಿಎಸ್ ಪಕ್ಷದ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ವೈರಲ್ ಆಗಿದ್ದ ಆಡಿಯೋದಲ್ಲಿ ಈ ಮೂವರು ಅಧಿಕಾರಿಗಳ ನಡುವೆ ನಡೆದಿದ್ದ ಎನ್ನಲಾದ ದೂರವಾಣಿ ಸಂಭಾಷಣೆ ದಾಖಲಾಗಿತ್ತು. ಹಳಿಯಾಳ ಠಾಣೆಯ L&O ವಿಭಾಗದ PSI ಹುದ್ದೆ ಪಡೆಯಲು ನಡೆದಿದ್ದ ಹಣದ ವ್ಯವಹಾರ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪ್ರತಿ ತಿಂಗಳು ನೀಡಬೇಕಾದ ‘ಮಂತ್ಲಿ’ ಹಣದ ಕುರಿತು ಸಂಭಾಷಣೆ ನಡೆದಿತ್ತು ಎನ್ನಲಾಗಿದೆ.

ಆಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಪೊಲೀಸ್ ಇಲಾಖೆಯಲ್ಲಿನ ವರ್ಗಾವಣೆ ಹಾಗೂ ಹಣದ ವ್ಯವಹಾರದ ಕುರಿತು ಕೇಳಿಬಂದ ಆರೋಪಗಳು ಇಲಾಖೆಗೆ ಮುಜುಗರ ಉಂಟುಮಾಡಿದ್ದವು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಉತ್ತರ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಸಮಗ್ರ ತನಿಖೆಗೆ ಆದೇಶಿಸಲಾಗಿತ್ತು.

ಎಎಸ್‌ಪಿ ಕೃಷ್ಣಮೂರ್ತಿ ನೇತೃತ್ವದಲ್ಲಿ ನಡೆದ ಪ್ರಾಥಮಿಕ ತನಿಖೆಯ ಬಳಿಕ ವರದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಲ್ಲಿಸಲಾಗಿತ್ತು. ತನಿಖಾ ವರದಿಯ ಆಧಾರದ ಮೇಲೆ ಇಲಾಖೆಯ ಶಿಸ್ತು ಹಾಗೂ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ಮೂವರು PSIಗಳನ್ನು ಸೇವೆಯಿಂದ ಅಮಾನತುಗೊಳಿಸಿ ಎಸ್‌ಪಿ ದೀಪನ್ ಎಂ.ಎನ್. ಅವರು ಆದೇಶಿಸಿದ್ದಾರೆ.

ಆಡಿಯೋದಲ್ಲಿನ ಆರೋಪಗಳು ಹಾಗೂ ಅದರ ಸತ್ಯಾಸತ್ಯತೆ ಸೇರಿದಂತೆ ಪ್ರಕರಣದ ಕುರಿತು ಇಲಾಖಾ ಮಟ್ಟದಲ್ಲಿ ಮುಂದಿನ ತನಿಖೆ ನಡೆಯುವ ಸಾಧ್ಯತೆಯಿದೆ.