S Shorts

“ಅಗ್ನಿಪರೀಕ್ಷೆ ನೀಡಲು ನಾನೇನು ಸೀತೆಯಲ್ಲ”: ಮತ್ತೆ Glamour ಲೋಕಕ್ಕೆ ಮರಳಿದ Viral ‘ಸಾಧ್ವಿ’!

“ಅಗ್ನಿಪರೀಕ್ಷೆ ನೀಡಲು ನಾನೇನು ಸೀತೆಯಲ್ಲ”: ಮತ್ತೆ Glamour ಲೋಕಕ್ಕೆ ಮರಳಿದ Viral ‘ಸಾಧ್ವಿ’!
Author: Sagaradventure
Posted By: Sagaradventure
Updated: Jan 14, 2026 | 5:09 AM

ಪ್ರಯಾಗರಾಜ್: ಕಳೆದ ವರ್ಷದ ಮಹಾಕುಂಭ ಮೇಳದಲ್ಲಿ ಸನ್ಯಾಸಿನಿಯ ವೇಷ ಧರಿಸಿ, ತಮ್ಮ ಸೌಂದರ್ಯದಿಂದಲೇ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದ ಹರ್ಷ ರಿಚಾರಿಯಾ (Harsha Richhariya), ಇದೀಗ ಆಧ್ಯಾತ್ಮಿಕ ಜೀವನಕ್ಕೆ ವಿದಾಯ ಹೇಳಿದ್ದಾರೆ. “ಧರ್ಮದ ಹಾದಿಯಲ್ಲಿ ನನಗೆ ಸಿಕ್ಕಿದ್ದು ಅವಮಾನ ಮತ್ತು ಸಾಲ ಮಾತ್ರ” ಎಂದು ಬೇಸರ ವ್ಯಕ್ತಪಡಿಸಿರುವ ಅವರು, ಮರಳಿ ಮಾಡೆಲಿಂಗ್ ಲೋಕಕ್ಕೆ ಕಾಲಿಡುವುದಾಗಿ ಘೋಷಿಸಿದ್ದಾರೆ.

​ಸುಮಾರು 30 ವರ್ಷದ ಹರ್ಷ್, ವೃತ್ತಿಯಲ್ಲಿ ನಿರೂಪಕಿ ಮತ್ತು ಮಾಡೆಲ್ ಆಗಿದ್ದರು. ಆದರೆ ಲೌಕಿಕ ಬದುಕಿನ ಜಂಜಾಟಗಳಿಂದ ಬೇಸತ್ತು ಆಧ್ಯಾತ್ಮದತ್ತ ಮುಖ ಮಾಡಿದ್ದರು. 2025ರ ಪ್ರಯಾಗರಾಜ್ ಮಹಾಕುಂಭದಲ್ಲಿ ಅವರು ಕಾಣಿಸಿಕೊಂಡ ರೀತಿ, ಬಾಲಿವುಡ್ ನಟಿಯರನ್ನೂ ಮೀರಿಸುವಂತಿದ್ದ ಅವರ ಸೌಂದರ್ಯ ಅವರನ್ನು ‘ವೈರಲ್ ಸಾಧ್ವಿ’ಯನ್ನಾಗಿ ಮಾಡಿತ್ತು. ಆದರೆ, ಆ ಖ್ಯಾತಿ ಅವರಿಗೆ ನೆಮ್ಮದಿ ತರುವ ಬದಲಿಗೆ ಸಂಕಷ್ಟ ತಂದೊಡ್ಡಿದೆ.

​ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಭಾವುಕ ವಿಡಿಯೋ ಹಂಚಿಕೊಂಡಿರುವ ಹರ್ಷ್, “ಧರ್ಮದ ಹಾದಿಯಲ್ಲಿ ಕಳೆದ ಒಂದು ವರ್ಷದಲ್ಲಿ ನಾನು ಅನುಭವಿಸಿದ್ದು ಕೇವಲ ಸೈಬರ್ ದಾಳಿ (Cyber Attacks) ಮತ್ತು ವಿರೋಧಗಳನ್ನು ಮಾತ್ರ. ನಾನು ಮಾಡೆಲಿಂಗ್ ಮತ್ತು ಆಂಕರಿಂಗ್ ಮಾಡುವಾಗ ಕೈತುಂಬಾ ಹಣ ಸಂಪಾದಿಸುತ್ತಿದ್ದೆ. ಆದರೆ ಧರ್ಮದ ಮಾರ್ಗ ಆರಿಸಿಕೊಂಡ ಮೇಲೆ ನನ್ನ ಕೈ ಖಾಲಿಯಾಯ್ತು, ಸಾಲದ ಹೊರೆ ಹೆಚ್ಚಾಯ್ತು. ಇದನ್ನು ಹೊರತುಪಡಿಸಿ ಬೇರೇನೂ ಸಾಧನೆಯಾಗಲಿಲ್ಲ” ಎಂದು ಕಣ್ಣೀರು ಹಾಕಿದ್ದಾರೆ.

​ಸಮಾಜದ ಧೋರಣೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, “ಒಬ್ಬ ಮಹಿಳೆ ಬಗ್ಗದೇ ಇದ್ದಾಗ ಸಮಾಜ ಆಕೆಯ ಚಾರಿತ್ರ್ಯದ ಮೇಲೆ ಬೆರಳು ಮಾಡುತ್ತದೆ. ಪದೇ ಪದೇ ಅಗ್ನಿಪರೀಕ್ಷೆ ನೀಡಲು ನಾನೇನು ಸೀತಾಮಾತೆಯಲ್ಲ, ಈಗಾಗಲೇ ಕೊಡಬೇಕಾದ ಎಲ್ಲಾ ಪರೀಕ್ಷೆಗಳನ್ನು ನೀಡಿದ್ದೇನೆ. ನಿಮ್ಮ ಧರ್ಮ ನಿಮ್ಮ ಬಳಿಯೇ ಇರಲಿ” ಎಂದು ಖಡಕ್ ಆಗಿ ನುಡಿದಿದ್ದಾರೆ.

​ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ನಡೆಯುವ ಮಾಘ ಮೇಳದಲ್ಲಿ ಪವಿತ್ರ ಸ್ನಾನ ಮಾಡುವ ಮೂಲಕ ತಮ್ಮ ಸನ್ಯಾಸತ್ವದ ಸಂಕಲ್ಪವನ್ನು ತ್ಯಜಿಸುವುದಾಗಿ ಹರ್ಷ ತಿಳಿಸಿದ್ದಾರೆ. “ಮನೆಯಲ್ಲಿದ್ದು ತಂದೆ-ತಾಯಿಯ ಸೇವೆ ಮಾಡುವುದೇ ಇನ್ಮುಂದೆ ನನ್ನ ಪಾಲಿನ ಶ್ರೇಷ್ಠ ಧರ್ಮ” ಎಂದು ಹೇಳುವ ಮೂಲಕ ತಮ್ಮ ಹಳೆಯ ಗ್ಲಾಮರ್ ಪ್ರಪಂಚಕ್ಕೆ (Modeling World) ಮರಳುವ ನಿರ್ಧಾರ ಪ್ರಕಟಿಸಿದ್ದಾರೆ. ಸದ್ಯ ಈ ವಿಡಿಯೋ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.