ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಕಚೇರಿಯಲ್ಲಿ ಸುದೀರ್ಘ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ಪೊಲೀಸರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
‘ಸಿನಿಮಾ ಬಾಕಿ ಇದೆ’ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ ಅವರು, ಗೃಹ ಸಚಿವರ ಬಳಿ ಕೇವಲ ಟ್ರೇಲರ್ ಮಾತ್ರ ಇದೆ, ಆದರೆ ನನ್ನ ಬಳಿ ಇಡೀ ‘ಫುಲ್ ಪಿಕ್ಚರ್’ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ. ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ನಾನು ಕದ್ದುಮುಚ್ಚಿ ಯಾವ ಕೆಲಸವನ್ನೂ ಮಾಡುವುದಿಲ್ಲ, ಈ ಕುಮಾರಸ್ವಾಮಿಯನ್ನು ಟಚ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಗುಡುಗಿದ್ದಾರೆ.
ದೆಹಲಿಯ ತಮ್ಮ ನಿವಾಸದಲ್ಲಿ ಮೊಬೈಲ್ ಬದಲಾವಣೆಯಾಗಿದೆ ಹಾಗೂ ಆರೋಪಿ ರಿತೇಶ್ ಪಾಂಡೆಯನ್ನು ಅಲ್ಲಿಯೇ ಬಂಧಿಸಲಾಗಿದೆ ಎಂಬ ಪೊಲೀಸ್ ಆಯುಕ್ತರ ಹೇಳಿಕೆಗಳನ್ನು ಕುಮಾರಸ್ವಾಮಿ ಸಾರಾಸಗಟಾಗಿ ತಳ್ಳಿಹಾಕಿದರು. ಬಂಧಿತ ಆರೋಪಿ ಯಾರೆಂದೇ ತನಗೆ ಗೊತ್ತಿಲ್ಲ, ನನ್ನ ಮನೆಗೆ ಕೆಲಸದ ನಿಮಿತ್ತ ನಿತ್ಯ ನೂರಾರು ಜನ ಬರುತ್ತಾರೆ, ಅದಕ್ಕೆಲ್ಲ ನನ್ನನ್ನೇ ಹೊಣೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಪೊಲೀಸರು ಆತನನ್ನು ಗಾಜಿಯಾಬಾದ್‌ನಲ್ಲಿ ಬಂಧಿಸಿದ್ದಾರೋ ಅಥವಾ ನನ್ನ ಮನೆಯಲ್ಲೋ ಎಂಬುದನ್ನು ಸ್ಪಷ್ಟಪಡಿಸಬೇಕು. ಬಂಧಿತ ಯುವಕ ವಿಚಾರಣೆ ವೇಳೆ ಗಾಜಿಯಾಬಾದ್ ವಿಳಾಸ ನೀಡಿದ್ದರೂ, ಉದ್ದೇಶಪೂರ್ವಕವಾಗಿ ನನ್ನ ಮನೆಯ ವಿಳಾಸವನ್ನು ತಳಕು ಹಾಕಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಈ ಸಂಪೂರ್ಣ ತನಿಖೆ ಕೇವಲ ಸಿದ್ದರಾಮಯ್ಯನವರಿಗೆ ‘ಕ್ಲೀನ್ ಚಿಟ್’ ನೀಡಿ ಸರ್ಕಾರ ಉಳಿಸಿಕೊಳ್ಳುವ ಆತುರದ ಪ್ರಯತ್ನವಾಗಿದೆ ಎಂದು ಹೆಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದರು. ಎಫ್‌ಎಸ್‌ಎಲ್ ವರದಿ ಬರುವ ಮುನ್ನವೇ ಪೊಲೀಸರು ಆತುರಪಡುತ್ತಿರುವುದೇಕೆ ಎಂದು ಪ್ರಶ್ನಿಸಿದ ಅವರು, ನಿನ್ನೆ ಕನ್ನಡ ರಾಜ್ಯೋತ್ಸವ ಮುಗಿದ ಬಳಿಕ ಕಂಠೀರವ ಸ್ಟೇಡಿಯಂನ ಕೊಠಡಿಯೊಂದರಲ್ಲಿ ಡಿಜಿ ಹಾಗೂ ಇತರ ಉನ್ನತ ಅಧಿಕಾರಿಗಳೊಂದಿಗೆ ಯಾವ ರಹಸ್ಯ ಸಭೆ ನಡೆಸಿದ್ದೀರಿ ಎಂಬುದು ತಮಗೆ ತಿಳಿದಿದೆ ಎಂದರು.
ಪ್ರಕರಣವನ್ನು ಹಳ್ಳ ಹಿಡಿಸುವ ಪ್ರಯತ್ನ ನಡೆಯುತ್ತಿದ್ದು, ಸಿದ್ದರಾಮಯ್ಯನವರು ಕೋರ್ಟ್‌ನಿಂದ ಸ್ಟೇ ತರುವ ಅಗತ್ಯವಿರಲಿಲ್ಲ, ತಮ್ಮ ಹಳೆಯ ಧ್ವನಿಯಲ್ಲಿಯೇ ಜನರೆದುರು ಮಾತನಾಡಬೇಕಿತ್ತು ಎಂದು ಅವರು ಸವಾಲು ಹಾಕಿದರು.
2011 ಹಾಗೂ 2023ರಲ್ಲಿ ನಡೆದ ಚಿತ್ರೀಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದ ಕುಮಾರಸ್ವಾಮಿ, ಈ ಪ್ರಕರಣದಲ್ಲಿ ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಹಾಗೂ ಇನ್ನೋರ್ವ ವಯಸ್ಸಾದ ವ್ಯಕ್ತಿಯ ಪಾತ್ರದ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಕೇರಳ ಮೂಲದ 14 ವರ್ಷದ ಹೆಣ್ಣುಮಗಳು ಮಕ್ಕಳ ಆಯೋಗಕ್ಕೆ ಕಳುಹಿಸಿದ ಇ-ಮೇಲ್ ಮತ್ತು ಆಕೆಯ ಹೇಳಿಕೆ ಏನಾಯಿತು ಎಂಬುದನ್ನು ಪೊಲೀಸರು ಬಹಿರಂಗಪಡಿಸಬೇಕು ಎಂದರು.
ಇದೇ ವೇಳೆ, ತಾವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಕಾರಣಕ್ಕೆ ಕಾಂಗ್ರೆಸ್ ನಾಯಕರು ಸೇಡಿನ ರಾಜಕಾರಣ ಮಾಡುತ್ತಿದ್ದು, ತಮ್ಮ ಪಕ್ಷವನ್ನು ಮುಗಿಸುವ ಉದ್ದೇಶದಿಂದಲೇ ಪ್ರಜ್ವಲ್ ರೇವಣ್ಣ ಮೇಲೆ 3 ಕೇಸ್‌ಗಳನ್ನು ಹೆಚ್ಚುವರಿಯಾಗಿ ಹಾಕಿಸಿದ್ದಾರೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
