ಬಿಸಿಲಿನಲ್ಲಿ ಓಡಾಡಿ ಮನೆಗೆ ಬಂದಾಗ, ಕಠಿಣ ವ್ಯಾಯಾಮ (Exercise) ಮಾಡಿದಾಗ ಅಥವಾ ಹೆಚ್ಚು ಉಪ್ಪಿನಂಶ ಇರುವ ಆಹಾರ ಸೇವಿಸಿದಾಗ ನಮಗೆ ಬಾಯಾರಿಕೆ ಆಗುವುದು ಸಹಜ. ಆದರೆ, ನೀವು ಎಷ್ಟೇ ನೀರು (Water) ಕುಡಿದರೂ ಪದೇ ಪದೇ ಬಾಯಾರಿಕೆ ಆಗುತ್ತಿದ್ದರೆ, ಅದು ಕೇವಲ ಬಿಸಿಲಿನ ಪ್ರಭಾವವಷ್ಟೇ ಆಗಿರದೆ, ದೇಹದಲ್ಲಿನ ಯಾವುದೋ ಗಂಭೀರ ಆರೋಗ್ಯ ಸಮಸ್ಯೆಯ (Health problem) ಮುನ್ಸೂಚನೆಯಾಗಿರಬಹುದು.
ವೈದ್ಯಕೀಯ ಭಾಷೆಯಲ್ಲಿ ಈ ರೀತಿ ವಿಪರೀತ ಬಾಯಾರಿಕೆಯಾಗುವ ಸಮಸ್ಯೆಯನ್ನು ‘ಪಾಲಿಡಿಪ್ಸಿಯಾ’ (Polydipsia) ಎಂದು ಕರೆಯಲಾಗುತ್ತದೆ. ಹಾಗಾದರೆ, ಈ ರೀತಿ ಸಾಮಾನ್ಯಕ್ಕಿಂತ ಹೆಚ್ಚು ನೀರು ಕುಡಿಯುವ ಅಗತ್ಯ ನಮಗೆ ಏಕೆ ಎದುರಾಗುತ್ತದೆ ಎಂಬುದರ ಹಿಂದಿನ ಕಾರಣಗಳನ್ನು ತಿಳಿಯೋಣ.
ನಿರ್ಜಲೀಕರಣ ಹಾಗೂ ಮಧುಮೇಹದ ಭೀತಿ (Dehydration and Diabetes risk): ವಿಪರೀತ ಬಾಯಾರಿಕೆಗೆ ಅತಿ ಮುಖ್ಯ ಕಾರಣವೆಂದರೆ ದೇಹದಲ್ಲಿನ ನೀರಿನ ಕೊರತೆ ಅಥವಾ ನಿರ್ಜಲೀಕರಣ. ಅತಿಯಾಗಿ ಬೆವರುವುದು , ವಾಂತಿ , ಭೇದಿ ಅಥವಾ ಜ್ವರದಿಂದ ಬಳಲುತ್ತಿರುವಾಗ ದೇಹವು ಹೆಚ್ಚಿನ ದ್ರವಾಂಶವನ್ನು ಕಳೆದುಕೊಳ್ಳುತ್ತದೆ. ಇದಲ್ಲದೆ, ವೈದ್ಯರು ಇಂತಹ ನಿರಂತರ ಬಾಯಾರಿಕೆಯ ಲಕ್ಷಣವನ್ನು ಕಂಡಾಗ ಪ್ರಾಥಮಿಕವಾಗಿ ಮಧುಮೇಹವನ್ನು ಪರೀಕ್ಷಿಸಲು ಸಲಹೆ ನೀಡುತ್ತಾರೆ. ರಕ್ತದಲ್ಲಿ ಸಕ್ಕರೆಯ ಮಟ್ಟ ಮಿತಿಮೀರಿದಾಗ, ದೇಹವು ಹೆಚ್ಚುವರಿ ಸಕ್ಕರೆಯನ್ನು ಮೂತ್ರದ ಮೂಲಕ ಹೊರಹಾಕಲು ಶ್ರಮಿಸುತ್ತದೆ. ಇದರಿಂದಾಗಿ ಪದೇ ಪದೇ ಮೂತ್ರ ವಿಸರ್ಜನೆ ಉಂಟಾಗಿ, ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಪರಿಣಾಮವಾಗಿ ರೋಗಿಗೆ ನಿರಂತರ ಬಾಯಾರಿಕೆಯ ಅನುಭವವಾಗುತ್ತದೆ. ಜೊತೆಗೆ ತೀವ್ರ ಆಯಾಸ , ದೃಷ್ಟಿ ಮಂದವಾಗುವುದು ಹಾಗೂ ಕಾರಣವಿಲ್ಲದೆ ದಿಢೀರ್ ತೂಕ ಇಳಿಕೆಯಂತಹ ಲಕ್ಷಣಗಳು ಕಂಡುಬಂದರೆ, ಅದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು.
ಔಷಧಿಗಳ ಪ್ರಭಾವ ಮತ್ತು ಒಣ ಬಾಯಿ ಸಮಸ್ಯೆ: ಕೇವಲ ಅನಾರೋಗ್ಯ ಮಾತ್ರವಲ್ಲ, ನಾವು ಸೇವಿಸುವ ಕೆಲವು ನಿರ್ದಿಷ್ಟ ಔಷಧಿಗಳು, ವಾತಾವರಣದ ತೀವ್ರ ಶುಷ್ಕತೆ , ಅತಿಯಾದ ಕೆಫೀನ್ ಸೇವನೆ ಹಾಗೂ ಮಾನಸಿಕ ಒತ್ತಡ ಅಥವಾ ಆತಂಕವೂ ನಮ್ಮ ಬಾಯಾರಿಕೆಯನ್ನು ಹೆಚ್ಚಿಸಬಹುದು. ಕೆಲವೊಮ್ಮೆ ದೇಹದಲ್ಲಿ ನೀರಿನ ಕೊರತೆ ಇಲ್ಲದಿದ್ದರೂ, ಬಾಯಿ ಒಣಗುವಿಕೆ ಅಥವಾ ‘ಡ್ರೈ ಮೌತ್’ ಸಮಸ್ಯೆಯಿಂದಲೂ ಪದೇ ಪದೇ ಬಾಯಾರಿಕೆಯಾಗಬಹುದು. ಬಾಯಿಯಲ್ಲಿ ಅಗತ್ಯ ಪ್ರಮಾಣದ ಲಾಲಾರಸ ಉತ್ಪತ್ತಿಯಾಗದಿರುವುದೇ ಈ ಸಮಸ್ಯೆಗೆ ಮೂಲ ಕಾರಣವಾಗಿದೆ.
ವೈದ್ಯರ ಸಲಹೆ ಕಡ್ಡಾಯ: ಬಾಯಾರಿಕೆಯಾದ ತಕ್ಷಣ ಸಾಕಷ್ಟು ನೀರು ಕುಡಿಯುವುದರಿಂದ ಈ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗುತ್ತದೆ ಎಂದು ನೀವು ಭಾವಿಸಿದ್ದರೆ, ಅದು ತಪ್ಪು ಕಲ್ಪನೆ . ನೀವು ಸಾಕಷ್ಟು ನೀರು ಕುಡಿದ ನಂತರವೂ ಈ ತೊಂದರೆ ದೀರ್ಘಕಾಲದವರೆಗೆ ಮುಂದುವರಿದರೆ, ಭವಿಷ್ಯದಲ್ಲಿ ಎದುರಾಗಬಹುದಾದ ಯಾವುದೋ ದೊಡ್ಡ ಕಾಯಿಲೆಗೆ ನಿಮ್ಮ ದೇಹವು ಮುನ್ನೆಚ್ಚರಿಕೆ ನೀಡುತ್ತಿದೆ ಎಂದೇ ಅರ್ಥ. ಹೀಗಾಗಿ ಇದ್ದಕ್ಕಿದ್ದಂತೆ ವಿಪರೀತ ಬಾಯಾರಿಕೆ ಶುರುವಾದರೆ, ಕೇವಲ ನೀರು ಕುಡಿಯುತ್ತಾ ಕೂರುವ ಬದಲು ತಕ್ಷಣವೇ ತಜ್ಞ ವೈದ್ಯರನ್ನು ಭೇಟಿಯಾಗಿ ಸೂಕ್ತ ತಪಾಸಣೆ ಹಾಗೂ ಸಲಹೆ ಪಡೆಯುವುದು ಅತ್ಯಂತ ಅಗತ್ಯ.
