ಬೆಂಗಳೂರು: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಹಿರಿಯ ವೈದ್ಯಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು (DHO), ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಉಪ ನಿರ್ದೇಶಕರನ್ನು ಬೃಹತ್ ಪ್ರಮಾಣದಲ್ಲಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಸರ್ಕಾರದ ಸಚಿವಾಲಯದ ವಿಕಾಸ ಸೌಧದಿಂದ ಅಕ್ಟೋಬರ್ 28ರಂದು ಈ ಕುರಿತು ಆದೇಶ ಪ್ರಕಟವಾಗಿದೆ.
ನೂತನ ಡಿಹೆಚ್‌ಒ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರ ನೇಮಕ:
ಈ ನೂತನ ಆದೇಶದನ್ವಯ, ಚಾಮರಾಜನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ (DHO) ಡಾ. ನೀಲಾದೇವಿ, ಕಲಬುರಗಿಗೆ ಡಾ. ಸಿದ್ಧಾಮಪ್ಪ ಪಾಟೀಲ ಹಾಗೂ ಶಿವಮೊಗ್ಗ ಜಿಲ್ಲೆಗೆ ಡಾ. ಕೆ.ಪಿ. ಕಾಂತರಾಜು ಅವರನ್ನು ನೇಮಿಸಲಾಗಿದೆ. ಜಿಲ್ಲಾ ಶಸ್ತ್ರಚಿಕಿತ್ಸಕರಾಗಿ ಹಾಸನ ಜಿಲ್ಲೆಗೆ ಡಾ. ಜಿ.ಎಸ್. ಶ್ರೀಧರ್, ಚಿಕ್ಕಬಳ್ಳಾಪುರಕ್ಕೆ ಡಾ. ರಮೇಶ್ ಪಿ.ವಿ., ಬೆಳಗಾವಿಗೆ ಡಾ. ಎಂ.ಎಸ್. ಪಲ್ಲೇದ ಹಾಗೂ ಮಂಡ್ಯ ಜಿಲ್ಲೆಗೆ ಡಾ. ವೀರಭದ್ರಪ್ಪ ಪಿ. ಅವರನ್ನು ನಿಯೋಜಿಸಲಾಗಿದೆ. ಕೋಲಾರದ ಕೆ.ಎನ್.ಟಿ.ಬಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾಗಿ ಡಾ. ಕಮಲಮ್ಮ ಎಂ. ಮತ್ತು ಹಾಸನದ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾಗಿ ಡಾ. ಹರೀಶ್ ಎಂ.ಕೆ. ನೇಮಕಗೊಂಡಿದ್ದಾರೆ.
ಉಪ ನಿರ್ದೇಶಕರು ಹಾಗೂ ಪ್ರಾಂಶುಪಾಲರ ವರ್ಗಾವಣೆ:
ಕಲಬುರಗಿ ಮತ್ತು ಚಿತ್ರದುರ್ಗ ಜಿಲ್ಲಾ ತರಬೇತಿ ಕೇಂದ್ರಗಳ ಪ್ರಾಂಶುಪಾಲರಾಗಿ ಡಾ. ಮಾರುತಿ ರಾವ್ ಕಾಂಬಳೆ, ಡಾ. ಶರಣಬಸಪ್ಪ ಕ್ಯಾದನಾಳಿ ಹಾಗೂ ಡಾ. ಮಂಜುನಾಥ ಡಿ.ಎನ್. ಅವರನ್ನು ನೇಮಿಸಲಾಗಿದೆ. ಬೆಂಗಳೂರಿನ ಆರೋಗ್ಯಸೌಧ ಹಾಗೂ ವಿವಿಧ ವಿಭಾಗಗಳ ಉಪ ನಿರ್ದೇಶಕರಾಗಿ ಡಾ. ಜನಾರ್ದನ್ ಹೆಚ್.ವಿ, ಡಾ. ವೀಣಾ ಕೆ, ಡಾ. ಡಿ.ಎಂ. ನೇತ್ರಾ ರಾಣಿ, ಡಾ. ಯಲ್ಲೆ ರಮೇಶ್ ಬಾಬು, ಡಾ. ಅಶೋಕ್ ರೆಡ್ಡಿ ಎಂ, ಡಾ. ಕವಿತಾ, ಡಾ. ಎಸ್. ಮಂಜುನಾಥ್, ಡಾ. ಅನುಪಮಾ ಡಿ, ಡಾ. ಜಿ. ಶ್ರೀನಿವಾಸ್, 108 ಆರೋಗ್ಯ ಕವಚಕ್ಕೆ ಡಾ. ಮಹೇಶ್ ಕುಮಾರ್ ಎಸ್.ಎಸ್ ಹಾಗೂ 104 ಆರೋಗ್ಯ ಸಹಾಯವಾಣಿ ಕಮಾಂಡ್ ಸೆಂಟರ್‌ಗೆ ಡಾ. ಶ್ರೀಧರ್ ಎಸ್.ಎಂ. ಅವರನ್ನು ನಿಯೋಜಿಸಲಾಗಿದೆ.
ಆರ್‌ಎಂಒ, ಕಾರ್ಯಕ್ರಮಾಧಿಕಾರಿಗಳ ಬದಲಾವಣೆ:
ಬೆಂಗಳೂರಿನ ಬೋರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ಡಾ. ವೆಂಕಟರೆಡ್ಡಿ ಬಿ, ವಿಕ್ಟೋರಿಯಾ ಆಸ್ಪತ್ರೆಗೆ ಡಾ. ಶಶಿಧರ್ ಎಸ್ ಹಾಗೂ ವಾಣಿವಿಲಾಸ ಆಸ್ಪತ್ರೆಗೆ ಡಾ. ಸುಮ ಕೆ.ಎಸ್. ಅವರನ್ನು ನಿವಾಸಿ ವೈದ್ಯಾಧಿಕಾರಿಗಳಾಗಿ (RMO) ವರ್ಗಾಯಿಸಲಾಗಿದೆ. ಇದರೊಂದಿಗೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕು ಆರೋಗ್ಯಾಧಿಕಾರಿಯಾಗಿ ಡಾ. ಶರಣಬಸವರಾಜ್ ಹಾಗೂ ಆನೇಕಲ್ ತಾಲೂಕು ಆರೋಗ್ಯಾಧಿಕಾರಿಯಾಗಿ ಡಾ. ವಿನಯ್ ಕುಮಾರ್ ಎಂ.ವಿ. ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಇದಲ್ಲದೆ, ಚಿತ್ರದುರ್ಗ, ಚಾಮರಾಜನಗರ, ತುಮಕೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಕೋಲಾರ, ಧಾರವಾಡ, ಹಾಸನ, ಗದಗ, ರಾಯಚೂರು, ಮಂಡ್ಯ, ದಾವಣಗೆರೆ, ಯಾದಗಿರಿ, ಬಾಗಲಕೋಟೆ, ಉಡುಪಿ, ಉತ್ತರ ಕನ್ನಡ, ಬಳ್ಳಾರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಕುಷ್ಠರೋಗ, ಕ್ಷಯರೋಗ, ಮಲೇರಿಯಾ, ಆರ್‌ಸಿಹೆಚ್ ಹಾಗೂ ಕುಟುಂಬ ಕಲ್ಯಾಣ ವಿಭಾಗಗಳ ಜಿಲ್ಲಾ ಕಾರ್ಯಕ್ರಮಾಧಿಕಾರಿಗಳ ಹುದ್ದೆಗಳಿಗೂ ವ್ಯಾಪಕ ಬದಲಾವಣೆ ತರಲಾಗಿದೆ. ವರ್ಗಾವಣೆಗೊಂಡ ಎಲ್ಲಾ ಅಧಿಕಾರಿಗಳು ತಕ್ಷಣದಿಂದ ಜಾರಿಗೆ ಬರುವಂತೆ ಹೊಸ ಸ್ಥಳಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಸರ್ಕಾರ ಸೂಚಿಸಿದೆ.

