ಹಾಸನ: ಮನೆಯ ಮುಂದೆ ಸೈಕಲ್‌ನಲ್ಲಿ ಆಟವಾಡುತ್ತಿದ್ದ ಬಾಲಕ ಆಯಾತಪ್ಪಿ ನೀರಿನ ಸಂಪ್ (Sump)ಗೆ ಬಿದ್ದು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಹಾಸನ ಜಿಲ್ಲೆಯ ಅಣಚಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ದುರ್ಮರಣಕ್ಕೀಡಾದ ಬಾಲಕನನ್ನು ಎಡನ್ ಸ್ವೀವ್ (4) ಎಂದು ಗುರುತಿಸಲಾಗಿದೆ. ಬಾಲಕ ಎಡನ್ ಸ್ವೀವ್ (Eden Steve) ಮನೆಯ ಮುಂದೆ ತನ್ನ ಸೈಕಲ್‌ನಲ್ಲಿ ಆಟವಾಡುತ್ತಿದ್ದ. ಆ ಸಮಯದಲ್ಲಿ ಪೋಷಕರು ಮನೆಯೊಳಗಿದ್ದರು. ಕೆಲ ಸಮಯದ ನಂತರ ಹೊರಗೆ ಬಂದ ಪೋಷಕರು ಮಗುವಿಗಾಗಿ ಹುಡುಕಾಡಿದ್ದಾರೆ. ಈ ವೇಳೆ ಮನೆಯ ಬಳಿಯ ನೀರಿನ ಸಂಪ್‌ನ ಪಕ್ಕದಲ್ಲಿ ಮಗುವಿನ ಸೈಕಲ್ ಬಿದ್ದಿರುವುದು ಕಂಡುಬಂದಿದೆ. ಸಂಪ್ ಪರಿಶೀಲಿಸಿದಾಗ, ಬಾಲಕನ ಶವ ನೀರಿನಲ್ಲಿ ತೇಲುತ್ತಿರುವುದು ಗೋಚರಿಸಿದೆ.
ತಕ್ಷಣವೇ ಪೋಷಕರು ಬಾಲಕನನ್ನು ಹಾಸನ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ, ಅಷ್ಟರಾಗಲೇ ಮಗು ಸಾವನ್ನಪ್ಪಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಈ ದುರ್ಘಟನೆಯ ಹಿನ್ನೆಲೆಯಲ್ಲಿ ಹಾಸನ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
