ಹೊಸನಗರ: ಶಿವಮೊಗ್ಗ-ಉಡುಪಿ ಗಡಿಯ ಹುಲಿಕಲ್ (ಬಾಳೆಬರೇ) ಘಾಟಿಯಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್‌ವೊಂದಕ್ಕೆ ದಿಢೀರ್ ಬೆಂಕಿ ಹೊತ್ತಿಕೊಂಡ ಆತಂಕಕಾರಿ ಘಟನೆ ಶನಿವಾರ ನಡೆದಿದೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ ಎಲ್ಲ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಚಲಿಸುತ್ತಿದ್ದ ಬಸ್‌ನಿಂದ ಮೊದಲು ದಿಢೀರನೆ ಹೊಗೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ತಕ್ಷಣ ಪ್ರಯಾಣಿಕರು ಮತ್ತು ಸಿಬ್ಬಂದಿ ಕೆಳಕ್ಕೆ ಇಳಿದಿದ್ದಾರೆ. ಬಳಿಕ ಕ್ಷಣಾರ್ಧದಲ್ಲೇ ಬೆಂಕಿ ಇಡೀ ಬಸ್‌ಗೆ ವ್ಯಾಪಿಸಿದೆ. ಬಸ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ತಕ್ಷಣವೇ ಸುರಕ್ಷಿತವಾಗಿ ಹೊರಬಂದಿದ್ದರಿಂದ, ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
ಬಸ್‌ಗೆ ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸಮಗ್ರ ತನಿಖೆಯ ಬಳಿಕವಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗುವ ಸಾಧ್ಯತೆಯಿದೆ. ಈ ಘಟನೆಯಿಂದಾಗಿ ಘಾಟಿ ರಸ್ತೆಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡು, ಆತಂಕದ ವಾತಾವರಣ ನಿರ್ಮಾಣವಾಗಿತ್ತು.
