ಬೆಂಗಳೂರು: ನನ್ನನ್ನು ಹೆದರಿಸಲು ಬರಬೇಡಿ, ನಾನು ಯಾವನಿಗೂ ಹೆದರೋದಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಕಿಡಿಕಾರಿದ್ದಾರೆ.
ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣೆ ಕಾಯ್ದೆ ಕುರಿತು ಚರ್ಚಿಸಲು ಕರೆದಿದ್ದ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DCM D.K. Shivakumar) ಅವರು ಸದಸ್ಯರೊಬ್ಬರು ಬರೆದಿದ್ದ ಪತ್ರದಿಂದ ಬಹಿರಂಗವಾಗಿ ಸಿಡಿದೆದ್ದಿದ್ದಾರೆ. ಹಾಗೂ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿಲ್ಲ ಎಂದು ವಾರ್ನ್ ಮಾಡಿ ಪತ್ರ ಬರೆದಿದ್ದ ವ್ಯಕ್ತಿಯ ವಿರುದ್ಧ ಡಿಕೆಶಿ ಕಿಡಿಕಾರಿದರು.
ಕಿರಣ್ ಹೆಬ್ಬಾರ್ (Kiran Hebbar) ಎಂಬ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಸದಸ್ಯರೊಬ್ಬರು, “ಕಾಂಗ್ರೆಸ್ ಸರ್ಕಾರ ಕೆಲಸ ಮಾಡಿಲ್ಲ,” ಎಂದು ಆರೋಪಿಸಿ ಡಿಕೆಶಿಯವರಿಗೆ ಪತ್ರ ಬರೆದು ವಾರ್ನ್ ಮಾಡಿದ್ದರು.
ಪತ್ರವನ್ನು ಸಭೆಯಲ್ಲಿ ಪ್ರಸ್ತಾಪಿಸಿದ ಡಿಕೆ ಶಿವಕುಮಾರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನನಗೆ ವಾರ್ನ್ ಮಾಡೋದು, ಎಚ್ಚರಿಕೆ ಕೊಡೋದು ನಡೆಯಲ್ಲ. ಬೇಸಿಕ್ ಕಾಮನ್ ಸೆನ್ಸ್ ಇಟ್ಟುಕೊಂಡು ನನ್ನ ಹತ್ತಿರ ಡೀಲ್ ಮಾಡಬೇಕು ಎಂದು ಗುಡುಗಿದರು.
ಪ್ರಧಾನಿ (PM), ಹೋಂ ಮಿನಿಸ್ಟರ್‌ಗೆ (Home Minister) ಹೆದರದೇ ಜೈಲಿಗೆ ಹೋದವನು ನಾನು. ಇವನು ಯಾರು ಹೆಬ್ಬಾರ್‌ಗೆ ನಾನು ಹೆದರ್ತೀನಾ? ನಿಮ್ಮ ವಾರ್ನಿಂಗ್‌ಗೆ ನಾವು ಹೆದರಲ್ಲ. ಈ ಸರ್ಕಾರವನ್ನು ಹೆದರಿಸೋಕೆ ಬರಬೇಡಿ ಎಂದು ಆಕ್ರೋಶ ಹೊರಹಾಕಿದರು.
ಸೋದರನ ಸೋಲು ಪ್ರಸ್ತಾಪ:
ಸಭೆಯಲ್ಲಿ, ಡಿಕೆಶಿ ಅವರು ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ತಾನು ಹಿಂದೆ ಸಾಕಷ್ಟು ಸಹಾಯ ಮಾಡಿದರೂ, ಲೋಕಸಭೆ ಚುನಾವಣೆಯಲ್ಲಿ ತಮ್ಮ ಸೋದರ ಡಿ.ಕೆ. ಸುರೇಶ್ (D.K. Suresh) ಅವರನ್ನು ಸೋಲಿಸಿದ್ದನ್ನು ಪ್ರಸ್ತಾಪಿಸಿದರು. ನಾನು ಸಾವಿರಾರು ಅಪಾರ್ಟ್‌ಮೆಂಟ್ ಕಟ್ಟಿದ್ದೇನೆ, ಜಾಗ ಕೊಟ್ಟಿದ್ದೇನೆ. ನಮ್ಮ ಅಧಿಕಾರಿಗಳು ನಿಮಗೆ ಸಹಕರಿಸಲ್ಲ ಅಂದರೆ ಏನು ಮಾಡ್ತೀರಾ? ನಾವು ಸಹಾಯ ಮಾಡಿದರೂ, ನನ್ನ ತಮ್ಮನನ್ನು ಒಂದೊಂದು ಕ್ಷೇತ್ರದಲ್ಲಿ ಒಂದೊಂದು ಲಕ್ಷದಲ್ಲಿ ಸೋಲಿಸಿದ್ರಿ. ಆಗ ನನಗೆ ಅನ್ನಿಸಿತ್ತು, ಸುಮ್ಮನೆ ಯಾಕೆ ನಿಮಗೆಲ್ಲ ಸಹಾಯ ಮಾಡಬೇಕು ಅಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆದರೂ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದ ಕಾರಣಕ್ಕಾಗಿ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣೆ ಕಾಯ್ದೆ ಚರ್ಚೆಗೆ ಕರೆಸಿರುವುದಾಗಿ ಸ್ಪಷ್ಟಪಡಿಸಿದರು.
