ಬೆಳಗಾವಿ: ಸುವರ್ಣಸೌಧದಲ್ಲಿ ನಡೆಯುತ್ತಿರುವ ಕರ್ನಾಟಕ ಚಳಿಗಾಲದ ಅಧಿವೇಶನದಲ್ಲಿ (Karnataka Winter Session) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ವಿರೋಧ ಪಕ್ಷವಾದ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 2023ರಂತೆ 2028ರಲ್ಲೂ ಕಾಂಗ್ರೆಸ್ ಸರ್ಕಾರವೇ ಜನಾಶೀರ್ವಾದದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಬಿಜೆಪಿಯವರು ಸದಾ ವಿರೋಧ ಪಕ್ಷದ ಸ್ಥಾನದಲ್ಲಿಯೇ ಉಳಿಯುತ್ತಾರೆ ಎಂದು ಕಿಡಿಕಾರಿದರು.
ಸದನದಲ್ಲಿ ವಿರೋಧ ಪಕ್ಷದವರ ಪ್ರಶ್ನೆಗಳಿಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ನಾಯಕರ ಟೀಕೆಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. , ಉರಿಯುವುದರ ಮೇಲೆ ಉಪ್ಪು ಹಾಕಬಾರದೆಂಬ ಗಾದೆ ಮಾತಿದೆ. ಆದರೆ, ವಿರೋಧ ಪಕ್ಷದವರು ಇರುವುದೇ ಉರಿಯುವುದರ ಮೇಲೆ ಉಪ್ಪು ಸುರಿಯಲು ಎಂದು ಸಿಎಂ ಟೀಕಿಸಿದರು.
ವಿರೋಧ ಪಕ್ಷದವರು ಎಷ್ಟೇ ಪ್ರಚೋದನೆ ಮಾಡಿದರೂ, ನಮ್ಮ 140 ಶಾಸಕರಾರೂ ಪ್ರಚೋದಿತರಾಗುವುದಿಲ್ಲ. ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿರಬೇಕೆಂದು ಜನರು ಆಶೀರ್ವಾದ ಮಾಡಿ ಕಳಿಸಿದ್ದಾರೆ. ವಿರೋಧ ಪಕ್ಷದವರು ಇದರಲ್ಲಿ ಹುಳಿ ಹಿಂಡುವ ಅಗತ್ಯವಿಲ್ಲ ಎಂದರು.
ಕರ್ನಾಟಕದ ಜನ ಬಿಜೆಪಿಗೆ ಎಂದಿಗೂ ಅಧಿಕಾರಕ್ಕೆ ತರುವುದಿಲ್ಲ. ಬಿಜೆಪಿ (BJP) ರಾಜ್ಯದಲ್ಲಿ ಎರಡು ಬಾರಿ ಅಧಿಕಾರ ನಡೆಸಿದ್ದರೂ, ಒಮ್ಮೆಯೂ ಜನರ ಆಶೀರ್ವಾದದಿಂದ ಬಂದಿಲ್ಲ. 2008 ಮತ್ತು 2018ರಲ್ಲಿ ‘ಆಪರೇಷನ್ ಕಮಲ’ ಮಾಡಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
“ಜನರ ನಾಡಿಮಿಡಿತ ಕಾಂಗ್ರೆಸ್ ಸರ್ಕಾರಕ್ಕೆ ತಿಳಿದಿದೆ. 2023ರಲ್ಲಿ ಆಶೀರ್ವಾದ ಮಾಡಿದಂತೆ 2028ರಲ್ಲಿಯೂ ಕಾಂಗ್ರೆಸ್ ಸರ್ಕಾರವೇ ಆಡಳಿತಕ್ಕೆ ಬರಲಿದೆ. ಬಿಜೆಪಿಯವರು ಸದಾ ವಿರೋಧ ಪಕ್ಷದ ಸ್ಥಾನದಲ್ಲಿಯೇ ಇರಲಿದ್ದಾರೆ. ಬಿಜೆಪಿಯ ಅಧ್ಯಕ್ಷಗಿರಿ ಆಯ್ಕೆಯಲ್ಲಿ ಒಮ್ಮತವಿಲ್ಲ, ಅವರಿಗೆ ಅಸೂಯೆ ಕಾಡುತ್ತಿದೆ ಎಂದರು.
ನಾನು ಹೋದರೆ ಹೋದೇನು ಎಂದು ಕನಕದಾಸರು ಹೇಳಿದ್ದರು. ಇದು ನನ್ನ ಸರ್ಕಾರವಲ್ಲ, ನಮ್ಮ ಸರ್ಕಾರ ಎಂದ ಸಿಎಂ, ಕೊನೆಯಲ್ಲಿ “ಈಗಲೂ ನಾನೇ ಮುಖ್ಯಮಂತ್ರಿ. ಹೈಕಮಾಂಡ್ ಹೇಳುವ ತನಕವೂ ನಾನೇ ಮುಖ್ಯಮಂತ್ರಿ,” ಎಂದು ತಮ್ಮ ಸ್ಥಾನವನ್ನು ಮತ್ತೊಮ್ಮೆ ದೃಢಪಡಿಸಿದರು.
