ಬೆಂಗಳೂರು: ಪುಲಿಕೇಶಿನಗರದಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಅಕ್ಟೋಬರ್ 20 ರಂದು ಸಂಭವಿಸಿದ್ದ ಐಇಡಿ (IED) ಸ್ಫೋಟ ಪ್ರಕರಣವನ್ನು ಕೇವಲ 72 ಗಂಟೆಗಳಲ್ಲಿ ಭೇದಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ತ್ವರಿತ ಕಾರ್ಯಾಚರಣೆ ನಡೆಸಿ ಪ್ರಕರಣ ಬೇಧಿಸಿದ ವಿಶೇಷ ಪೊಲೀಸ್ ತಂಡದ ಕಾರ್ಯವನ್ನು ಮೆಚ್ಚಿ, ಹಿರಿಯ ಪೊಲೀಸ್ ಅಧಿಕಾರಿಗಳ ಪರವಾಗಿ ಡಿಸಿಪಿ (ಪೂರ್ವ) ಅವರು 3 ಲಕ್ಷ ರೂ. ನಗದು ಬಹುಮಾನವನ್ನು ಘೋಷಿಸಿದ್ದಾರೆ.
1,500 ಸಿಸಿಟಿವಿ ಪರಿಶೀಲನೆ, ಮೂವರ ಬಂಧನ:
ಬಾಂಬ್ ಸ್ಫೋಟದ ಬೆನ್ನಲ್ಲೇ ತನಿಖೆಗಿಳಿದ ವಿಶೇಷ ತಂಡ, ಬರೋಬ್ಬರಿ 1,500 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಜಾಲಾಡಿ ಪರಿಶೀಲನೆ ನಡೆಸಿದೆ. ಖಚಿತ ಸುಳಿವು ಆಧರಿಸಿ ಅಸ್ಸಾಂ ಮೂಲದ ಮೂವರು ಶಂಕಿತರನ್ನು ಬಂಧಿಸಲಾಗಿದೆ. ಬಂಧಿತ ಮೂವರೂ ಬಾಲ್ಯದ ಸ್ನೇಹಿತರಾಗಿದ್ದಾರೆ.
ವೈಯಕ್ತಿಕ ದ್ವೇಷ, ಯೂಟ್ಯೂಬ್ ನೋಡಿ ಬಾಂಬ್ ತಯಾರಿ:
ಆಸ್ತಿ ವಿವಾದ ಹಾಗೂ ಮದುವೆ ರದ್ದಾದ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬದ ಮೇಲಿನ ವೈಯಕ್ತಿಕ ದ್ವೇಷವೇ ಈ ಬಾಂಬ್ ಸ್ಫೋಟಕ್ಕೆ ಪ್ರಮುಖ ಕಾರಣ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದ ಈ ಮೂವರು ಸ್ನೇಹಿತರು, ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಪಟಾಕಿ ಸಿಡಿಮದ್ದುಗಳನ್ನು ಬಳಸಿ ದೇಶಿ ನಿರ್ಮಿತ ಐಇಡಿ (Homemade IED) ಬಾಂಬ್ ತಯಾರಿಸಿದ್ದರು ಎಂಬ ಆಘಾತಕಾರಿ ವಿಚಾರ ಬಯಲಾಗಿದೆ.
