ತುಮಕೂರು: ಕರ್ತವ್ಯದ ಅತಿಯಾದ ಒತ್ತಡ ಮತ್ತು ಮೇಲಧಿಕಾರಿಗಳ ನಿರಂತರ ಕಿರುಕುಳಕ್ಕೆ ಬೇಸತ್ತು ತುಮಕೂರು ಜಿಲ್ಲಾಧಿಕಾರಿ (DC) ಕಚೇರಿ ಮುಂದೆ ಕಂದಾಯ ಇಲಾಖೆ ನೌಕರರು ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿಯು ಭಾನುವಾರ ಅತ್ಯಂತ ತೀವ್ರ ಸ್ವರೂಪಕ್ಕೆ ತಲುಪಿದೆ. ಇತ್ತೀಚೆಗಷ್ಟೇ ರಾಜ್ಯಾದ್ಯಂತ ಚಾಲನೆ ಪಡೆದುಕೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕರ್ತವ್ಯದ ನಿಮಿತ್ತ ಶನಿವಾರ ಮುಂಜಾನೆ ಗಡಿಬಿಡಿಯಲ್ಲಿ ತೆರಳುತ್ತಿದ್ದಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗ್ರಾಮ ಆಡಳಿತ ಅಧಿಕಾರಿ (VAO) ಭುವನಾ ಅವರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕೆರಳಿರುವ ಕಂದಾಯ ನೌಕರರು, ಯುವ ಅಧಿಕಾರಿಯ ಸಾವಿಗೆ ನ್ಯಾಯ ಸಿಗಬೇಕು ಮತ್ತು ಇದಕ್ಕೆ ಕಾರಣರಾದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಧರಣಿ ಮುಂದುವರಿಸಿದ್ದಾರೆ.
ಶನಿವಾರ ಇಡೀ ರಾತ್ರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನೌಕರರು ಪ್ರತಿಭಟನೆ ನಡೆಸಿದ್ದಾರೆ. ತಡರಾತ್ರಿ 11:15ರ ಸುಮಾರಿಗೆ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಸುಮಾರು ಒಂದೂವರೆ ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದರಾದರೂ, ಸಂಧಾನ ಸಂಪೂರ್ಣ ವಿಫಲಗೊಂಡಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಕಂದಾಯ ನೌಕರರ ಸಂಘ ಪಟ್ಟು ಹಿಡಿದಿದ್ದು, ಭಾನುವಾರ ಬೆಳಗ್ಗೆ 9 ಗಂಟೆಯ ನಂತರ ಪ್ರತಿಭಟನೆಯ ಧ್ವನಿ ಮತ್ತಷ್ಟು ತೀವ್ರಗೊಂಡಿದೆ.
ಮೇಲಧಿಕಾರಿಗಳ ಅತಿಯಾದ ಒತ್ತಡವೇ ದುರಂತಕ್ಕೆ ಕಾರಣ
ತುಮಕೂರು ನಾಡಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭುವನಾ ಅವರಿಗೆ ಮೇಲಧಿಕಾರಿಗಳು ತೀವ್ರ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಸಹೋದ್ಯೋಗಿ ಸಿಬ್ಬಂದಿ ಗಂಭೀರವಾಗಿ ಆರೋಪಿಸಿದ್ದಾರೆ. ಮುಂಜಾನೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಯಾವುದೇ ವಿಶ್ರಾಂತಿಯಿಲ್ಲದೆ ನಿರಂತರವಾಗಿ ಕೆಲಸ ಮಾಡಿಸಲಾಗುತ್ತಿತ್ತು. ಅಪಘಾತ ಸಂಭವಿಸಿದ ದಿನ ಮುಂಜಾನೆ 6:30ರೊಳಗೆ ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗಬೇಕು ಎಂದು ಮೇಲಧಿಕಾರಿಗಳು ಕಠಿಣ ಆಜ್ಞೆ ಹೊರಡಿಸಿದ್ದರು. ಈ ಒತ್ತಡಕ್ಕೆ ಹೆದರಿ ಮುಂಜಾನೆ ಗಡಿಬಿಡಿಯಲ್ಲಿ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಗೂಳೂರು ಬಳಿ ಭೀಕರ ಅಪಘಾತ ಸಂಭವಿಸಿ ಭುವನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ನೌಕರರು ಆಕ್ರೋಶ ಹೊರಹಾಕಿದ್ದಾರೆ. ಜಿಲ್ಲಾಧಿಕಾರಿ (DC), ಅಪರ ಜಿಲ್ಲಾಧಿಕಾರಿ (ADC), ಉಪವಿಭಾಗಾಧಿಕಾರಿ (AC) ಹಾಗೂ ತಹಶೀಲ್ದಾರ್ ಅವರುಗಳು ನೀಡುತ್ತಿದ್ದ ಅತಿಯಾದ ಕೆಲಸದ ಒತ್ತಡವೇ ಈ ದುರಂತಕ್ಕೆ ನೇರ ಕಾರಣ ಎಂದು ಆರೋಪಿಸಿರುವ ನೌಕರರು, ತಕ್ಷಣವೇ ಜಿಲ್ಲಾಧಿಕಾರಿಗಳ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
SIR ಕರ್ತವ್ಯಕ್ಕೆ ತೆರಳುತ್ತಿದ್ದ ಗ್ರಾಮ ಲೆಕ್ಕಾಧಿಕಾರಿಗೆ ಅಪರಿಚಿತ ವಾಹನ ಡಿಕ್ಕಿ, ಗಂಭೀರ ಗಾಯ
ಸ್ವಗ್ರಾಮ ವರದನಾಯಕನಹಳ್ಳಿಯಲ್ಲಿ ಇಂದು ಅಂತ್ಯಸಂಸ್ಕಾರ
ಮತ್ತೊಂದೆಡೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ವರದನಾಯಕನಹಳ್ಳಿಯಲ್ಲಿರುವ ಭುವನಾ ಅವರ ನಿವಾಸದ ಬಳಿ ಹೆತ್ತವರ ಹಾಗೂ ಆಪ್ತರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಪ್ರತಿದಿನ ಮನೆಯಿಂದಲೇ ತುಮಕೂರಿಗೆ ಕೆಲಸಕ್ಕೆ ಓಡಾಡುತ್ತಿದ್ದ ಭುವನಾ ಅವರು, ಇತ್ತೀಚಿನ ಎಸ್‌ಐಆರ್ (SIR) ಕರ್ತವ್ಯದ ಒತ್ತಡದಿಂದ ತೀವ್ರ ಮಾನಸಿಕವಾಗಿ ಕಂಗೆಟ್ಟಿದ್ದರು ಎಂದು ಅವರ ಚಿಕ್ಕಪ್ಪ ರಮೇಶ್ ತಿಳಿಸಿದ್ದಾರೆ.
ತಂದೆ ರಮೇಶ್ ಹಾಗೂ ತಾಯಿ ಸರೋಜಾ ಅವರ ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ಯುವ ಅಧಿಕಾರಿಯ ಅಕಾಲಿಕ ಅಗಲಿಕೆ ಇಡೀ ಸಾರ್ವಜನಿಕ ವಲಯವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಭಾನುವಾರ ಬೆಳಗ್ಗೆ 10:30ರ ಸುಮಾರಿಗೆ ವರದನಾಯಕನಹಳ್ಳಿಯ ಸ್ವಗ್ರಾಮದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಸಕಲ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ಅವರ ತೋಟದಲ್ಲೇ ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ.
