ರಷ್ಯಾ ಮತ್ತು ಅಮೆರಿಕದ ಕಚ್ಚಾ ತೈಲ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ಇದೀಗ ಯುರೋಪ್‌ಗೆ ಅತಿ ಹೆಚ್ಚು ಡೀಸೆಲ್ ಪೂರೈಕೆ ಮಾಡುವ ಪ್ರಮುಖ ದೇಶವಾಗಿ ಭಾರತ ಹೊರಹೊಮ್ಮಿದೆ.
ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯ ಮೆರೆದಿರುವ ಭಾರತವು, ತೈಲ ಬಿಕ್ಕಟ್ಟು ಎದುರಿಸುತ್ತಿರುವ ಯುರೋಪಿಯನ್ ರಾಷ್ಟ್ರಗಳ ಇಂಧನ ಬೇಡಿಕೆಯನ್ನು ಪೂರೈಸುವಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತಿದೆ.
ವರ್ಟೆಕ್ಸಾ ಇಂಧನ ಮತ್ತು ಸರಕು ಸಾಗಣೆ ವಿಶ್ಲೇಷಣಾ ಸಂಸ್ಥೆಯು ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯ ಪ್ರಕಾರ, ಆಗಸ್ಟ್ ತಿಂಗಳಿನಲ್ಲಿ ಬಾಬ್-ಎಲ್-ಮಂಡೆಬ್ ಜಲಸಂಧಿಯ ಮೂಲಕ ಯುರೋಪ್‌ಗೆ ರವಾನೆಯಾದ ಒಟ್ಟು ಡೀಸೆಲ್ ಪ್ರಮಾಣದಲ್ಲಿ ಭಾರತವು ಬರೋಬ್ಬರಿ ಶೇ. 60 ರಷ್ಟು ಸಿಂಹಪಾಲು ಹೊಂದಿದೆ.
ಕಳೆದ ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಈ ಪ್ರಮುಖ ಸಾರಿಗೆ ಮಾರ್ಗದಲ್ಲಿ ಸರಕು ಸಾಗಣೆ ಸಂಪೂರ್ಣವಾಗಿ ಸ್ತಬ್ಧಗೊಂಡಿತ್ತು. ಆದರೆ, ಆಗಸ್ಟ್ ತಿಂಗಳಿನಲ್ಲಿ ಪ್ರತಿದಿನ ಸುಮಾರು 2 ಲಕ್ಷ ಬ್ಯಾರೆಲ್ ಡೀಸೆಲ್ ಯುರೋಪ್ ರಾಷ್ಟ್ರಗಳತ್ತ ಸಾಗಣೆಯಾಗಿದ್ದು, ಇದರಲ್ಲಿ ಭಾರತದ ಕೊಡುಗೆ ಅತ್ಯಂತ ದೊಡ್ಡದಾಗಿದೆ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.
