S Shorts

ಭರ್ಜರಿ ಏರಿಕೆ ಕಂಡ ಭಾರತದ ವಿದೇಶಿ ವಿನಿಮಯ ಮೀಸಲು: 700 ಬಿಲಿಯನ್ ಡಾಲರ್ ಗಡಿ ದಾಟಿದ Forex ರಿಸರ್ವ್ಸ್

ಭರ್ಜರಿ ಏರಿಕೆ ಕಂಡ ಭಾರತದ ವಿದೇಶಿ ವಿನಿಮಯ ಮೀಸಲು: 700 ಬಿಲಿಯನ್ ಡಾಲರ್ ಗಡಿ ದಾಟಿದ Forex ರಿಸರ್ವ್ಸ್
Author: Sagaradventure
Posted By: Sagaradventure
Updated: Apr 19, 2026 | 2:04 PM

ಭಾರತದ ವಿದೇಶಿ ವಿನಿಮಯ ಮೀಸಲು ನಿಧಿ (Forex reserves) ಗಣನೀಯ ಏರಿಕೆ ಕಂಡಿದ್ದು, ದೇಶದ ಆರ್ಥಿಕತೆಗೆ ಆನೆಬಲ ತಂದಿದೆ. ನವದೆಹಲಿಯಲ್ಲಿ ಬಿಡುಗಡೆಯಾದ ಅಂಕಿ-ಅಂಶಗಳ ಪ್ರಕಾರ, ಏಪ್ರಿಲ್ 10 ರಂದು ಅಂತ್ಯಗೊಂಡ ವಾರದಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ 3.825 ಬಿಲಿಯನ್ ಡಾಲರ್‌ನಷ್ಟು ಹೆಚ್ಚಳವಾಗಿದೆ. ಇದರ ಹಿಂದಿನ ವಾರದಲ್ಲೂ ಮೀಸಲು ನಿಧಿಯು ಬರೋಬ್ಬರಿ 9.063 ಬಿಲಿಯನ್ ಡಾಲರ್‌ನಷ್ಟು ಭಾರೀ ಏರಿಕೆ ಕಂಡಿತ್ತು. ಈ ಸತತ ಏರಿಕೆಯೊಂದಿಗೆ ಇದೀಗ ಭಾರತದ ಒಟ್ಟು ವಿದೇಶೀ ವಿನಿಮಯ ಮೀಸಲು ನಿಧಿಯು 700.946 ಬಿಲಿಯನ್ ಡಾಲರ್ ಗಡಿ ದಾಟಿದೆ. ಆದಾಗ್ಯೂ, ದೇಶದ ಸಾರ್ವಕಾಲಿಕ ಗರಿಷ್ಠ ಫಾರೆಕ್ಸ್ ಮೀಸಲು ನಿಧಿಯ ಮಟ್ಟವನ್ನು ತಲುಪಲು ಇನ್ನೂ 28 ಬಿಲಿಯನ್ ಡಾಲರ್ ಕೊರತೆಯಿದೆ.

ಈ ಹಿಂದೆ 2026 ರ ಫೆಬ್ರವರಿ 27 ರಂದು ಭಾರತದ ಫಾರೆಕ್ಸ್ ರಿಸರ್ವ್ಸ್ 728.494 ಬಿಲಿಯನ್ ಡಾಲರ್ ತಲುಪುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಿಸಿತ್ತು. ಆದರೆ, ಆ ನಂತರದ ದಿನಗಳಲ್ಲಿ ಇರಾನ್ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಉಂಟಾದ ಭೌಗೋಳಿಕ-ರಾಜಕೀಯ ಸಂಘರ್ಷಗಳ ಪರಿಣಾಮವಾಗಿ ಭಾರತೀಯ ರೂಪಾಯಿ ಮೌಲ್ಯದ ಮೇಲೆ ತೀವ್ರ ಒತ್ತಡ ಬಿದ್ದಿತ್ತು. ರೂಪಾಯಿ ಮೌಲ್ಯದ ಕುಸಿತವನ್ನು ತಡೆಯುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಮೀಸಲು ನಿಧಿಯಲ್ಲಿದ್ದ ಒಂದಿಷ್ಟು ಡಾಲರ್‌ಗಳನ್ನು ಮಾರುಕಟ್ಟೆಗೆ ಬಿಡಬೇಕಾಯಿತು. ಈ ಅನಿವಾರ್ಯ ಕಾರಣಗಳಿಂದಾಗಿ ಫಾರೆಕ್ಸ್ ರಿಸರ್ವ್ಸ್ ಹಲವು ಬಿಲಿಯನ್ ಡಾಲರ್‌ಗಳಷ್ಟು ಕುಸಿತ ಕಂಡಿತ್ತು. ಇದೀಗ ಪರಿಸ್ಥಿತಿ ಸುಧಾರಿಸುತ್ತಿದ್ದು, ನಿಧಿ ಮತ್ತೆ ಏರುಮುಖವಾಗಿದೆ.

ಏಪ್ರಿಲ್ 10 ರಂದು ಅಂತ್ಯಗೊಂಡ ವಾರದಲ್ಲಿ ಏರಿಕೆಯಾದ 3.285 ಬಿಲಿಯನ್ ಡಾಲರ್ ಫಾರೆಕ್ಸ್ ಮೀಸಲು ನಿಧಿಯಲ್ಲಿ ಬಹುಪಾಲು ವಿದೇಶಿ ಕರೆನ್ಸಿಗಳೇ ಇವೆ ಎಂಬುದು ಗಮನಾರ್ಹ. ಆರ್‌ಬಿಐ (RBI) ಬರೋಬ್ಬರಿ 3.127 ಬಿಲಿಯನ್ ಡಾಲರ್ ಮೊತ್ತದ ಫಾರಿನ್ ಕರೆನ್ಸಿ ಅಸೆಟ್ (Foreign Currency Assets) ಹೆಚ್ಚಿಸಿಕೊಂಡಿದೆ. ಇತರ ಆಸ್ತಿಗಳ ಪೈಕಿ ಚಿನ್ನದ ಮೀಸಲು (Gold Reserves) 601 ಮಿಲಿಯನ್ ಡಾಲರ್‌ನಷ್ಟು ಏರಿಕೆ ಕಂಡಿದೆ. ಜೊತೆಗೆ ವಿಶೇಷ ಡ್ರಾಯಿಂಗ್ ಹಕ್ಕುಗಳು (SDR) 56 ಮಿಲಿಯನ್ ಡಾಲರ್ ಹಾಗೂ ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿನ (IMF) ಭಾರತದ ಮೀಸಲು ಸ್ಥಾನ ಕೂಡ 56 ಮಿಲಿಯನ್ ಡಾಲರ್‌ ಏರಿಕೆಯಾಗಿದೆ.

ಏಪ್ರಿಲ್ 10 ರ ಅಂಕಿ-ಅಂಶಗಳ ಪ್ರಕಾರ 700.946 ಬಿಲಿಯನ್ ಡಾಲರ್ ಒಟ್ಟು ಫಾರೆಕ್ಸ್ ರಿಸರ್ವ್ಸ್ ಪೈಕಿ, 555.946 ಬಿಲಿಯನ್ ಡಾಲರ್ ಫಾರಿನ್ ಕರೆನ್ಸಿ ಅಸೆಟ್, 121.343 ಬಿಲಿಯನ್ ಡಾಲರ್ ಚಿನ್ನದ ಮೀಸಲು, 18.763 ಬಿಲಿಯನ್ ಡಾಲರ್ ಎಸ್‌ಡಿಆರ್ ಹಾಗೂ 4.857 ಬಿಲಿಯನ್ ಡಾಲರ್ ಐಎಂಎಫ್ ಮೀಸಲು ಒಳಗೊಂಡಿದೆ. ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ಫಾರೆಕ್ಸ್ ರಿಸರ್ವ್ಸ್ ಹೊಂದಿರುವ ದೇಶಗಳ ಪೈಕಿ ಭಾರತ ಪ್ರಬಲ ಸ್ಥಾನದಲ್ಲಿದೆ. 3.643 ಟ್ರಿಲಿಯನ್ ಡಾಲರ್ ಹೊಂದಿರುವ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಜಪಾನ್ (1.294 ಟ್ರಿಲಿಯನ್ ಡಾಲರ್), ಸ್ವಿಟ್ಜರ್‌ಲ್ಯಾಂಡ್ (1.077 ಟ್ರಿಲಿಯನ್ ಡಾಲರ್) ಮತ್ತು ರಷ್ಯಾ (755 ಬಿಲಿಯನ್ ಡಾಲರ್) ನಂತರದ ಸ್ಥಾನಗಳಲ್ಲಿವೆ. 700 ಬಿಲಿಯನ್ ಡಾಲರ್ ಮೀಸಲು ನಿಧಿಯೊಂದಿಗೆ ಭಾರತ ಜಗತ್ತಿನ ಅಗ್ರ ರಾಷ್ಟ್ರಗಳ ಸಾಲಿನಲ್ಲಿ ಗಟ್ಟಿಯಾಗಿ ನಿಂತಿದೆ.