S Shorts

ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ: ಸೆನ್ಸೆಕ್ಸ್ 1,000ಕ್ಕೂ ಹೆಚ್ಚು ಅಂಕ, ನಿಫ್ಟಿ 300ಕ್ಕೂ ಅಧಿಕ ಪಾಯಿಂಟ್ಸ್ ಪತನ!

ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ: ಸೆನ್ಸೆಕ್ಸ್ 1,000ಕ್ಕೂ ಹೆಚ್ಚು ಅಂಕ, ನಿಫ್ಟಿ 300ಕ್ಕೂ ಅಧಿಕ ಪಾಯಿಂಟ್ಸ್ ಪತನ!
Author: Sagaradventure
Posted By: Sagaradventure
Updated: Sep 28, 2026 | 12:26 PM

ಭಾರತೀಯ ಷೇರು ಮಾರುಕಟ್ಟೆಯ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೋಮವಾರದ ವಹಿವಾಟಿನಲ್ಲಿ ಭಾರಿ ಕುಸಿತ ಕಂಡಿದ್ದು, ಸತತ 7 ನೇ ವಾರವೂ ನಷ್ಟದ ಹಾದಿಯನ್ನು ಮುಂದುವರಿಸಿವೆ. ಬೆಳಿಗ್ಗೆ 11:05 ರ ಸುಮಾರಿಗೆ ಬಿಎಸ್‌ಇ ಸೆನ್ಸೆಕ್ಸ್ ಬರೊಬ್ಬರಿ 1,007 ಅಂಕಗಳು ಅಥವಾ ಶೇಕಡಾ 1.36 ರಷ್ಟು ಕುಸಿತ ದಾಖಲಿಸಿ 72,888 ಮಟ್ಟಕ್ಕೆ ತಲುಪಿದೆ. ಅದೇ ರೀತಿ ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕವು 317 ಅಂಕಗಳು ಅಥವಾ ಶೇಕಡಾ 1.37 ರಷ್ಟು ಇಳಿಕೆಯಾಗಿ 22,823 ಮಟ್ಟಕ್ಕೆ ಕುಸಿದಿದೆ. 

ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 315.20 ಅಂಕಗಳು ಮತ್ತು ನಿಫ್ಟಿ 77.40 ಅಂಕಗಳ ಏರಿಕೆ ಕಂಡಿದ್ದರೂ ಸಹ, ಹೊಸ ವಾರದ ಆರಂಭದಲ್ಲೇ ಷೇರುಗಳು ಕಳೆದ 6 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ಹೂಡಿಕೆದಾರರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ.

ಸೆನ್ಸೆಕ್ಸ್‌ನ ಎಲ್ಲಾ 30 ಪ್ರಮುಖ ಕಂಪನಿಗಳ ಷೇರುಗಳು ಕೆಂಪು ಬಣ್ಣದಲ್ಲಿ ವಹಿವಾಟು ನಡೆಸಿದ್ದು, ಬಜಾಜ್ ಫೈನಾನ್ಸ್, ಕೋಟಕ್ ಮಹೀಂದ್ರಾ ಬ್ಯಾಂಕ್, ಹೆಚ್‌ಡಿಎಫ್‌ಸಿ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಹಿಂದೂಸ್ತಾನ್ ಯೂನಿಲಿವರ್, ಮಹೀಂದ್ರಾ ಅಂಡ್ ಮಹೀಂದ್ರಾ, ಲಾರ್ಸನ್ ಅಂಡ್ ಟೂಬ್ರೊ ಹಾಗೂ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಷೇರುಗಳು ಭಾರಿ ನಷ್ಟ ಅನುಭವಿಸಿ ಮಾರುಕಟ್ಟೆಯನ್ನು ಕೆಳಕ್ಕೆ ಎಳೆದಿವೆ. 

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ದಿಢೀರನೆ ಏರಿಕೆಯಾಗಿರುವುದು ಭಾರತೀಯ ಷೇರುಪೇಟೆಯ ಮೇಲೆ ಭಾರಿ ಒತ್ತಡವನ್ನು ಉಂಟುಮಾಡಿದೆ. ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕ್ರೂಡ್ ಶೇಕಡಾ 3 ಕ್ಕೂ ಹೆಚ್ಚು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 107.8 ಡಾಲರ್‌ ತಲುಪಿದೆ. ವಿಶ್ವದ 3 ನೇ ಅತಿ ದೊಡ್ಡ ಕಚ್ಚಾ ತೈಲ ಆಮದುದಾರ ರಾಷ್ಟ್ರವಾಗಿರುವ ಭಾರತಕ್ಕೆ ತೈಲ ಬೆಲೆ ಏರಿಕೆಯು ಆಮದು ವೆಚ್ಚವನ್ನು ಹೆಚ್ಚಿಸುವ ಜೊತೆಗೆ ಹಣದುಬ್ಬರದ ಒತ್ತಡವನ್ನು ಹೆಚ್ಚಿಸಲಿದೆ.

ಹಾರ್ಮುಜ್ ಜಲಸಂಧಿಯನ್ನು ಮರುತೆರೆಯುವ ಸಂಬಂಧ ಇರಾನ್ ಮುಂದಿಟ್ಟಿದ್ದ ಪ್ರಸ್ತಾವನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ ಬೆನ್ನಲ್ಲೇ, ತನ್ನ ಷರತ್ತುಗಳನ್ನು ಸಡಿಲಗೊಳಿಸುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಇದರಿಂದಾಗಿ ಆಯಕಟ್ಟಿನ ಜಲಮಾರ್ಗದ ಮೂಲಕ ನಡೆಯುವ ಸಂಚಾರ ಪುನರಾರಂಭದ ಭರವಸೆಗಳು ಮಸುಕಾಗಿದ್ದು, ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿಯಿಂದ ಕಚ್ಚಾ ತೈಲದ ಬೆಲೆಗಳು ಭುಗಿಲೆದ್ದಿವೆ. 

ಈ ಭೌಗೋಳಿಕ-ರಾಜಕೀಯ ಅನಿಶ್ಚಿತತೆಯು ಜಾಗತಿಕ ಹೂಡಿಕೆದಾರರ ವಿಶ್ವಾಸಕ್ಕೆ ಧಕ್ಕೆ ತಂದಿದ್ದು, ಏಷ್ಯಾದ ಮಾರುಕಟ್ಟೆಗಳಾದ ದಕ್ಷಿಣ ಕೊರಿಯಾದ ಕೋಸ್ಪಿ, ಜಪಾನ್‌ನ ನಿಕ್ಕಿ 225 ಮತ್ತು ಶಾಂಘೈ ಕಾಂಪೋಸಿಟ್ ಕೂಡ ನಷ್ಟದೊಂದಿಗೆ ವಹಿವಾಟು ನಡೆಸಿವೆ. ಇದರ ಜೊತೆಗೆ, ಶುಕ್ರವಾರ ಒಂದೇ ದಿನ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FIIs) ಬರೋಬ್ಬರಿ 3,693.93 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿ ಮಾರುಕಟ್ಟೆಯಿಂದ ಬಂಡವಾಳ ಹಿಂಪಡೆದಿರುವುದು ಇಂದಿನ ಭಾರಿ ಪತನಕ್ಕೆ ಪ್ರಮುಖ ಕಾರಣವಾಗಿದೆ.