S Shorts

RCB ವಿರುದ್ಧದ ಪಂದ್ಯದಲ್ಲಿ ಭಾರಿ ವಿವಾದ: ಡಗೌಟ್‌ನಲ್ಲೇ ಮೊಬೈಲ್ ಬಳಸಿ ಸಿಕ್ಕಿಬಿದ್ದ ರಾಜಸ್ಥಾನ್ ರಾಯಲ್ಸ್ ಮ್ಯಾನೇಜರ್!

RCB ವಿರುದ್ಧದ ಪಂದ್ಯದಲ್ಲಿ ಭಾರಿ ವಿವಾದ: ಡಗೌಟ್‌ನಲ್ಲೇ ಮೊಬೈಲ್ ಬಳಸಿ ಸಿಕ್ಕಿಬಿದ್ದ ರಾಜಸ್ಥಾನ್ ರಾಯಲ್ಸ್ ಮ್ಯಾನೇಜರ್!
Author: Sagaradventure
Posted By: Sagaradventure
Updated: Apr 12, 2026 | 5:44 PM

ಇಂಡಿಯನ್ ಪ್ರೀಮಿಯರ್ ಲೀಗ್ 2026 ರ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆದ ರೋಚಕ ಪಂದ್ಯವೊಂದು ಇದೀಗ ಅನಿರೀಕ್ಷಿತ ವಿವಾದಕ್ಕೆ ಸಾಕ್ಷಿಯಾಗಿದೆ. ಏಪ್ರಿಲ್ 10 ರಂದು ಗುವಾಹಟಿಯಲ್ಲಿ ನಡೆದ ಈ ಪಂದ್ಯದಲ್ಲಿ, ರಾಜಸ್ಥಾನ್ ರಾಯಲ್ಸ್ ತಂಡ ಗುರಿ ಬೆನ್ನಟ್ಟುತ್ತಿದ್ದ 11 ನೇ ಓವರ್‌ನಲ್ಲಿ ಈ ವಿವಾದ ನಡೆದಿದೆ. 

ರಾಜಸ್ಥಾನ್ ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರು ನೇರವಾಗಿ ಡಗೌಟ್‌ನಲ್ಲಿ ಕುಳಿತು ಮೊಬೈಲ್ ಫೋನ್ ಬಳಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದು ಇಡೀ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಪಕ್ಕದಲ್ಲೇ ಕುಳಿತು ರೋಮಿ ಭಿಂದರ್ ಅವರು ಮೊಬೈಲ್‌ನಲ್ಲಿ ಏನನ್ನೋ ಟೈಪ್ ಮಾಡುತ್ತಿರುವ ದೃಶ್ಯಗಳು ಲೈವ್ ಟಿವಿಯಲ್ಲಿ ಪ್ರಸಾರವಾಗಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಬಿಸಿಸಿಐನ ಭ್ರಷ್ಟಾಚಾರ ವಿರೋಧಿ ಘಟಕದ ಕಟ್ಟುನಿಟ್ಟಿನ ನಿಯಮಗಳ ಪ್ರಕಾರ, ಪಂದ್ಯ ನಡೆಯುವಾಗ ಪ್ಲೇಯರ್ಸ್ ಅ್ಯಂಡ್ ಮ್ಯಾಚ್ ಅಫಿಶಿಯಲ್ಸ್ ಏರಿಯಾ ಅಂದರೆ ಡಗೌಟ್ ಮತ್ತು ಮೈದಾನದ ಆಸುಪಾಸಿನಲ್ಲಿ ಮೊಬೈಲ್ ಫೋನ್ ಸೇರಿದಂತೆ ಯಾವುದೇ ಸಂವಹನ ಸಾಧನಗಳನ್ನು ಬಳಸುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ತಂಡದ ಮ್ಯಾನೇಜರ್‌ಗಳಿಗೆ ಲಾಜಿಸ್ಟಿಕ್ಸ್ ಉದ್ದೇಶಗಳಿಗಾಗಿ ಫೋನ್ ಇಟ್ಟುಕೊಳ್ಳಲು ವಿನಾಯಿತಿ ನೀಡಲಾಗಿದ್ದರೂ, ಅದನ್ನು ಕೇವಲ ಡ್ರೆಸ್ಸಿಂಗ್ ರೂಮ್‌ನಲ್ಲಿ ಮಾತ್ರ ಬಳಸಬೇಕೆಂಬ ಸ್ಪಷ್ಟ ನಿಯಮವಿದೆ. ಈ ಗಂಭೀರ ನಿಯಮ ಉಲ್ಲಂಘನೆಯ ವಿಡಿಯೋ ತುಣುಕನ್ನು ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ಅಕ್ಷಮ್ಯ ಅಪರಾಧ ಎಂದಿರುವ ಅವರು, ಭ್ರಷ್ಟಾಚಾರ ವಿರೋಧಿ ಅಧಿಕಾರಿಗಳು ಅಲ್ಲಿ ಏನು ಮಾಡುತ್ತಿದ್ದರು ಎಂದು ನೇರವಾಗಿಯೇ ಪ್ರಶ್ನಿಸಿರುವುದು ವಿವಾದದ ಕಿಡಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಡಗೌಟ್‌ನಲ್ಲಿ ಮೊಬೈಲ್ ಬಳಸಿರುವ ಈ ಗಂಭೀರ ನಿಯಮ ಉಲ್ಲಂಘನೆಯ ಕುರಿತು ಬಿಸಿಸಿಐ ಈಗಾಗಲೇ ತನಿಖೆ ಆರಂಭಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಂದು ವೇಳೆ ತನಿಖೆಯಲ್ಲಿ ಮ್ಯಾನೇಜರ್ ತಪ್ಪಿತಸ್ಥರೆಂದು ಸಾಬೀತಾದರೆ, ರೋಮಿ ಭಿಂದರ್ ಅವರಿಗೆ ಭಾರೀ ದಂಡ ವಿಧಿಸುವ ಜೊತೆಗೆ ಮುಂದಿನ ಕೆಲವು ಪಂದ್ಯಗಳಿಗೆ ಅವರ ಮೇಲೆ ನಿಷೇಧ ಹೇರುವ ಸಾಧ್ಯತೆಗಳು ದಟ್ಟವಾಗಿವೆ. ಇದರ ಜೊತೆಗೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಗೆ ಕಠಿಣ ಎಚ್ಚರಿಕೆ ಅಥವಾ ದಂಡ ವಿಧಿಸುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. 

ಇಷ್ಟೆಲ್ಲಾ ವಿವಾದಗಳ ನಡುವೆಯೂ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಆರ್‌ಸಿಬಿ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ವಿಶೇಷವೆಂದರೆ, 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಕೇವಲ 26 ಎಸೆತಗಳಲ್ಲಿ 78 ರನ್ ಚಚ್ಚುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಈ ಮೊಬೈಲ್ ವಿವಾದ ಐಪಿಎಲ್‌ನ ಶಿಸ್ತು ಕ್ರಮಗಳ ಮೇಲೆ ಎಂತಹ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.