S Shorts

IPL Tickets | ನಮಗೆಂದು ಕನಿಷ್ಠ 5 ಟಿಕೆಟ್ ಕೊಡಿಸಿ: ಸದನದಲ್ಲಿ ಶಾಸಕರಿಂದ ಪಕ್ಷಾತೀತ ಬೇಡಿಕೆ

IPL Tickets | ನಮಗೆಂದು ಕನಿಷ್ಠ 5 ಟಿಕೆಟ್ ಕೊಡಿಸಿ: ಸದನದಲ್ಲಿ ಶಾಸಕರಿಂದ ಪಕ್ಷಾತೀತ ಬೇಡಿಕೆ
Author: Meghana Gowda
Posted By: Meghana Gowda
Updated: Mar 26, 2026 | 6:05 PM

ಬೆಂಗಳೂರು: ಐಪಿಎಲ್ ಪಂದ್ಯಗಳ ವೇಳೆ ಜನಪ್ರತಿನಿಧಿಗಳಿಗೆ ಕನಿಷ್ಠ ಸೌಜನ್ಯದ ಗೌರವ ಮತ್ತು ಟಿಕೆಟ್ (Ticket) ನೀಡುತ್ತಿಲ್ಲ ಎಂದು ಶಾಸಕ ವಿಜಯಾನಂದ ಕಾಶಪ್ಪನವರ್( MLA Vijayanand Kashappanavar ) ಸದನದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರದ ಸಕಲ ಸವಲತ್ತುಗಳನ್ನು ಪಡೆದುಕೊಳ್ಳುವ ಕೆಎಸ್‌ಸಿಎ (KSCA), ಶಾಸಕರಿಗೆ ಕನಿಷ್ಠ 4 ರಿಂದ 5 ಟಿಕೆಟ್‌ಗಳನ್ನು ನೀಡಬೇಕು ಎಂದು ಅವರು ಪ್ರಬಲವಾಗಿ ಆಗ್ರಹಿಸಿದ್ದಾರೆ.

ನಾವು ಸರ್ಕಾರದ ಭಾಗವಾಗಿದ್ದೇವೆ. ನಮ್ಮ ಕುಟುಂಬದವರು ಅಥವಾ ಕಾರ್ಯಕರ್ತರು ಪಂದ್ಯ ನೋಡಲು ಬಯಸಿದರೆ ನಾವು ಬ್ಲಾಕ್‌ನಲ್ಲಿ ಟಿಕೆಟ್ ಖರೀದಿಸಬೇಕಾ? ಶಾಸಕರಿಗೆ ಕನಿಷ್ಠ 5 ಟಿಕೆಟ್‌ಗಳನ್ನು ಗೌರವಪೂರ್ವಕವಾಗಿ ನೀಡುವ ವ್ಯವಸ್ಥೆ ಮಾಡಬೇಕು. ನಾವೆಲ್ಲಾ ವಿಐಪಿಗಳು (VIPs), ಶಾಸಕರಾಗಿದ್ದರೂ ಸಾಮಾನ್ಯರಂತೆ ಸಾಲಿನಲ್ಲಿ ನಿಂತು ಟಿಕೆಟ್ ಪಡೆಯಬೇಕೆ? ಹಿಂದೆ ಪೆವಿಲಿಯನ್‌ನಲ್ಲಿ ಶಾಸಕರಿಗೆ ಪ್ರತ್ಯೇಕ ಸ್ಥಾನವಿತ್ತು, ಈಗ ಶಾಸಕರೆಂದು ಗೊತ್ತಿದ್ದರೂ ಸೆಕ್ಯುರಿಟಿಗಳು ತಳ್ಳಾಟ ನಡೆಸುತ್ತಾರೆ.

 5 ಸಾವಿರದ ಟಿಕೆಟ್‌ಗಳು 35 ಸಾವಿರಕ್ಕೆ ಬ್ಲಾಕ್‌ನಲ್ಲಿ ಮಾರಾಟವಾಗುತ್ತಿವೆ. ಆನ್‌ಲೈನ್‌ನಲ್ಲಿ ಟಿಕೆಟ್ ಸಿಗುತ್ತಿಲ್ಲ, ಎಲ್ಲಾ ಏಜೆಂಟ್‌ಗಳ ಪಾಲಾಗುತ್ತಿದೆ. ಕಳೆದ ಬಾರಿ ಅನಿವಾರ್ಯವಾಗಿ ನಾನೇ ಬ್ಲಾಕ್‌ನಲ್ಲಿ ಟಿಕೆಟ್ ಪಡೆದು ಮನೆಯವರನ್ನು ಮ್ಯಾಚ್‌ಗೆ ಕಳಿಸಿದ್ದೆ. ಪೊಲೀಸ್ ರಕ್ಷಣೆ ಸೇರಿ ಎಲ್ಲಾ ಸೌಕರ್ಯವನ್ನು ಸರ್ಕಾರ ಕೊಡುತ್ತಿದೆ. ಆದರೆ ಕೆಎಸ್‌ಸಿಎ ಮಾತ್ರ ಶಾಸಕರಿಗೆ ಮತ್ತು ಮಂತ್ರಿಗಳಿಗೆ ಕಿಂಚಿತ್ತೂ ಸ್ಪಂದಿಸುತ್ತಿಲ್ಲ. ಇವರೇನು ಕೇವಲ ದುಡ್ಡು ಮಾಡುವುದಕ್ಕಷ್ಟೇ ಇದ್ದಾರೆಯೇ?” ಎಂದು ಪ್ರಶ್ನಿಸಿದರು.

ಉಪಮುಖ್ಯಮಂತ್ರಿಗಳ ಭರವಸೆ:

ಶಾಸಕರ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಡಿಸಿಎಂ ಅವರು, ಟಿಕೆಟ್ ಹಂಚಿಕೆಯಲ್ಲಿ ಆಗುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಲಾಗುವುದು ಮತ್ತು ಜನಪ್ರತಿನಿಧಿಗಳ ಗೌರವಕ್ಕೆ ಧಕ್ಕೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.