ಮಂಡ್ಯ: ಮಂಡ್ಯ ಜಿಲ್ಲಾ ಪಂಚಾಯತ್‌ನ ಕಾವೇರಿ ಸಭಾಂಗಣದಲ್ಲಿ ಇಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (Union Minister HD Kumaraswamy) ಅವರ ಅಧ್ಯಕ್ಷತೆಯಲ್ಲಿ ‘ದಿಶಾ’ (ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ) ಸಭೆ ಆರಂಭವಾಗಿದೆ. ಜಿಲ್ಲೆಯ ಕೇಂದ್ರ ಪುರಸ್ಕೃತ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಲು ಈ ಸಭೆ ಆಯೋಜಿತವಾಗಿದೆ.
ಸಭೆಯಲ್ಲಿ ಭಾಗಿಯಾದ ಗಣ್ಯರು:
ಸಭೆಯಲ್ಲಿ ಮಂಡ್ಯ ಶಾಸಕ ಗಣಿಗ ರವಿಕುಮಾರ್, ಕೆಆರ್ ಪೇಟೆ ಶಾಸಕ ಹೆಚ್.ಟಿ. ಮಂಜು, ಜಿಲ್ಲಾಧಿಕಾರಿ ಡಾ. ಕುಮಾರ, ಎಸ್‌ಪಿ ಡಾ. ವಿ.ಜೆ. ಶೋಭಾರಾಣಿ, ಜಿಲ್ಲಾ ಪಂಚಾಯತ್ ಸಿಇಓ ಕೆ.ಆರ್. ನಂದಿನಿ ಸೇರಿದಂತೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದಾರೆ. ಜೊತೆಗೆ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಮತ್ತು ಮಾಜಿ ಶಾಸಕ ಡಾ. ಕೆ. ಅನ್ನದಾನಿ ಕೂಡ ಉಪಸ್ಥಿತರಿದ್ದಾರೆ.
ಕಾಂಗ್ರೆಸ್ ಶಾಸಕರ ಅಸಹಕಾರ ಚಳವಳಿ:
ಜಿಲ್ಲೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಜಿದ್ದಾಜಿದ್ದಿ ಈ ಸಭೆಯಲ್ಲೂ ಎದ್ದುಕಂಡಿದೆ. ಮಂಡ್ಯ ಶಾಸಕ ಗಣಿಗ ರವಿಕುಮಾರ್ ಅವರನ್ನು ಹೊರತುಪಡಿಸಿ, ಜಿಲ್ಲೆಯ ಉಳಿದ ಎಲ್ಲಾ ಕಾಂಗ್ರೆಸ್ ಶಾಸಕರು ಸಭೆಗೆ ಗೈರಾಗಿದ್ದಾರೆ. ಇದು ಸತತ 4ನೇ ಬಾರಿ ಕಾಂಗ್ರೆಸ್ ಶಾಸಕರು ಹೆಚ್‌ಡಿಕೆ ನೇತೃತ್ವದ ಸಭೆಯಿಂದ ದೂರ ಉಳಿಯುತ್ತಿರುವುದು ವಿಶೇಷ.
ಈ ಹಿಂದೆ ಸಂಸದೆಯಾಗಿದ್ದ ಸುಮಲತಾ ಅಂಬರೀಶ್ ಅವರ ಸಭೆಗಳಿಗೆ ಜೆಡಿಎಸ್ ಶಾಸಕರು ಹೇಗೆ ಗೈರಾಗುತ್ತಿದ್ದರೋ, ಈಗ ಅದೇ ಹಾದಿಯನ್ನು ಕಾಂಗ್ರೆಸ್ ಶಾಸಕರು ಅನುಸರಿಸುತ್ತಿದ್ದಾರೆ. ಕೇಂದ್ರ ಸಚಿವರ ವಿರುದ್ಧ ಅಸಹಕಾರ ಮುಂದುವರಿಸುವ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಸಭೆಯಲ್ಲಿ ಕೇಂದ್ರದ ವಿವಿಧ ಯೋಜನೆಗಳಾದ ಜಲಜೀವನ್ ಮಿಷನ್, ಪಿಎಂ ಅವಾಸ್ ಯೋಜನೆ ಸೇರಿದಂತೆ ಪ್ರಮುಖ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಹೆಚ್‌ಡಿಕೆ ಮಾಹಿತಿ ಪಡೆಯುತ್ತಿದ್ದಾರೆ.
