S Shorts

ಷೇರು ಮಾರುಕಟ್ಟೆಯಲ್ಲಿ ‘Jio ಪ್ಲಾಟ್‌ಫಾರ್ಮ್ಸ್’ ಭರ್ಜರಿ ಎಂಟ್ರಿ: ಶೇ. 21ರಷ್ಟು ಲಾಭದೊಂದಿಗೆ ₹1,357ಕ್ಕೆ ಲಿಸ್ಟಿಂಗ್!

ಷೇರು ಮಾರುಕಟ್ಟೆಯಲ್ಲಿ ‘Jio ಪ್ಲಾಟ್‌ಫಾರ್ಮ್ಸ್’ ಭರ್ಜರಿ ಎಂಟ್ರಿ: ಶೇ. 21ರಷ್ಟು ಲಾಭದೊಂದಿಗೆ ₹1,357ಕ್ಕೆ ಲಿಸ್ಟಿಂಗ್!
Author: Sagaradventure
Posted By: Sagaradventure
Updated: Oct 28, 2026 | 10:41 AM

ಮುಂಬೈ: ರಿಲಯನ್ಸ್ ಸಮೂಹದ ‘ಜಿಯೋ ಪ್ಲಾಟ್‌ಫಾರ್ಮ್ಸ್’ ಬುಧವಾರ ದಲಾಲ್ ಸ್ಟ್ರೀಟ್‌ಗೆ (ಷೇರು ಮಾರುಕಟ್ಟೆ) ಭರ್ಜರಿಯಾಗಿ ಕಾಲಿಟ್ಟಿದೆ. ಬಿಎಸ್‌ಇ (BSE) ಹಾಗೂ ಎನ್‌ಎಸ್‌ಇ (NSE)ಯಲ್ಲಿ ಐಪಿಒ ಬೆಲೆಗಿಂತ ಶೇ. 21.3ರಷ್ಟು ಹೆಚ್ಚಿನ ಬೆಲೆಗೆ, ಅಂದರೆ ತಲಾ 1,357 ರೂ.ಗೆ ಷೇರುಗಳು ಲಿಸ್ಟ್ ಆಗುವ ಮೂಲಕ ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಟ್ಟಿವೆ.

ನಿರೀಕ್ಷೆಯಂತೆಯೇ ಲಾಭದಾಯಕ ಲಿಸ್ಟಿಂಗ್: 

ಜಿಯೋ ಪ್ಲಾಟ್‌ಫಾರ್ಮ್ಸ್ ತನ್ನ ಐಪಿಒ (IPO) ಬೆಲೆ ಪಟ್ಟಿಯನ್ನು 1,065 ರೂ.ನಿಂದ 1,119 ರೂ.ವರೆಗೆ ನಿಗದಿಪಡಿಸಿತ್ತು. ಬುಧವಾರದ ಪ್ರಿ-ಓಪನ್ ಸೆಷನ್‌ನಲ್ಲಿ ಷೇರುಗಳು 1,358 ರೂ. ಆಸುಪಾಸಿನಲ್ಲಿ ವಹಿವಾಟು ನಡೆಸುವ ಮೂಲಕ, ಅಪ್ಪರ್ ಬ್ಯಾಂಡ್ ಬೆಲೆ (1,119 ರೂ.) ಗಿಂತ 239 ರೂ. ಲಾಭದೊಂದಿಗೆ (ಪ್ರೀಮಿಯಂ) ಮಾರುಕಟ್ಟೆ ಪ್ರವೇಶಿಸಿವೆ. ಇದು ಮಾರುಕಟ್ಟೆಯ ಗ್ರೇ ಮಾರ್ಕೆಟ್ ಪ್ರೀಮಿಯಂ (GMP) ನಿರೀಕ್ಷೆಗಳಿಗೆ ಸಂಪೂರ್ಣ ಅನುಗುಣವಾಗಿದೆ.

ವ್ಯಾಪಾರವೇ ನನಗೆ ಪೂಜೆ ಎಂದ ಅನಂತ್ ಅಂಬಾನಿ: 

ಮುಂಬೈನಲ್ಲಿ ನಡೆದ ಲಿಸ್ಟಿಂಗ್ ಸಮಾರಂಭದಲ್ಲಿ ಮಾತನಾಡಿದ ರಿಲಯನ್ಸ್ ಇಂಡಸ್ಟ್ರೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ, ಜಿಯೋವನ್ನು ನಂಬಿದ ಕೋಟ್ಯಂತರ ಜನರಿಗೆ ಕೃತಜ್ಞತೆ ಸಲ್ಲಿಸಿದರು. “ವಿನಿಮಯ ಕೇಂದ್ರದಲ್ಲಿ ಇಂದು ಮೊಳಗುವ ಗಂಟೆ ನನಗೆ ದೇವಸ್ಥಾನದ ಗಂಟೆಯಿದ್ದಂತೆ. ಏಕೆಂದರೆ ನನಗೆ ವ್ಯಾಪಾರವೇ ಪೂಜೆ. ಪ್ರತಿ ಪೂಜೆಯೂ ಪ್ರಸಾದದೊಂದಿಗೆ ಮುಕ್ತಾಯಗೊಳ್ಳುತ್ತದೆ, ಮತ್ತು ಪ್ರಸಾದವನ್ನು ಯಾವಾಗಲೂ ಎಲ್ಲರಿಗೂ ಹಂಚಲಾಗುತ್ತದೆ” ಎಂದು ಭಾವುಕರಾಗಿ ನುಡಿದರು.

ಕೇರಳದ ಅಂಜಲಿಯ ಕಥೆ ಹಂಚಿಕೊಂಡ ಆಕಾಶ್ ಅಂಬಾನಿ: 

ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ (RJIL) ಅಧ್ಯಕ್ಷ ಆಕಾಶ್ ಅಂಬಾನಿ ಮಾತನಾಡಿ, “ಕೆಲವು ವರ್ಷಗಳ ಹಿಂದೆ ಕೇರಳದ ಗುಡ್ಡಗಾಡು ಪ್ರದೇಶದ ಅಂಜಲಿ ಎಂಬ ಬಾಲಕಿ ಶಾಲೆಯ ಪಾಠಗಳನ್ನು ಡೌನ್‌ಲೋಡ್ ಮಾಡಲು ಇಂಟರ್ನೆಟ್‌ಗಾಗಿ ಪ್ರತಿದಿನ 2 ಕಿ.ಮೀ. ನಡೆಯುತ್ತಿದ್ದಳು. ಜಿಯೋ ಬಂದ ನಂತರ ಆ ಕಷ್ಟ ದೂರವಾಯಿತು. ಜಿಯೋ ಯಶಸ್ಸನ್ನು ಇಂತಹ ಬದಲಾವಣೆ ಹಾಗೂ ಉತ್ತಮ ಭಾರತದ ನಿರ್ಮಾಣದಿಂದ ಅಳೆಯಲಾಗುತ್ತದೆ” ಎಂದರು.

ಇನ್ನು, ಬುಧವಾರ ಬೆಳಿಗ್ಗೆ 9:15ರ ಸುಮಾರಿಗೆ ಮಾರುಕಟ್ಟೆಯಲ್ಲಿ ಬೆಂಚ್‌ಮಾರ್ಕ್ ನಿಫ್ಟಿ 50 ಶೇ. 0.32ರಷ್ಟು ಕುಸಿದು 22,678ಕ್ಕೆ ಹಾಗೂ ಸೆನ್ಸೆಕ್ಸ್ ಶೇ. 0.47ರಷ್ಟು ಇಳಿಕೆಯಾಗಿ 73,253.44 ಅಂಕಗಳಲ್ಲಿ ವಹಿವಾಟು ನಡೆಸುತ್ತಿತ್ತು.