ಕಲಬುರಗಿ ಜಿಲ್ಲೆಯಲ್ಲಿ ಶಾಲಾ-ಕಾಲೇಜು ಕಟ್ಟಡಗಳ ಮೇಲ್ಛಾವಣಿ ಕುಸಿಯುವ ಆಘಾತಕಾರಿ ಘಟನೆಗಳು ಸತತವಾಗಿ ವರದಿಯಾಗುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ತೀವ್ರ ಆತಂಕ ಮನೆಮಾಡಿದೆ. ಎರಡು ದಿನಗಳ ಹಿಂದಷ್ಟೇ ನಗರದ ಪಿಯು ಕಾಲೇಜಿನಲ್ಲಿ ಮೇಲ್ಛಾವಣಿ ಕುಸಿದ ಘಟನೆ ಮಾಸುವ ಮುನ್ನವೇ, ಇದೀಗ ಆಳಂದ ತಾಲೂಕಿನಲ್ಲಿ ಮತ್ತೊಂದು ಅವಘಡ ಸಂಭವಿಸಿದೆ.
ಭಾನುವಾರದ ರಜೆಯಿಂದ ತಪ್ಪಿದ ಪ್ರಾಣಾಪಾಯ
ಆಳಂದ ತಾಲೂಕಿನ ಸಂಗೋಳಗಿ (ಸಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಮೇಲ್ಛಾವಣಿ ಏಕಾಏಕಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಭಾನುವಾರ ಶಾಲಾ ರಜಾದಿನವಾಗಿದ್ದರಿಂದ ಕೊಠಡಿಯಲ್ಲಿ ಯಾವುದೇ ವಿದ್ಯಾರ್ಥಿಗಳು ಇರಲಿಲ್ಲ. ಒಂದು ವೇಳೆ ವಾರದ ದಿನಗಳಲ್ಲಿ ಈ ಘಟನೆ ನಡೆದಿದ್ದರೆ, ಭಾರಿ ದೊಡ್ಡ ಮಟ್ಟದ ಅನಾಹುತ ಹಾಗೂ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಯಿತ್ತು. ಶಾಲಾ ಕಟ್ಟಡಗಳ ನಿರ್ವಹಣೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಎಷ್ಟರಮಟ್ಟಿಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದನ್ನು ಈ ಘಟನೆ ಎತ್ತಿತೋರಿಸುತ್ತಿದೆ.
ಪಿಯು ಕಾಲೇಜಿನಲ್ಲಿ ನಡೆದಿದ್ದ ಆಘಾತಕಾರಿ ಘಟನೆ
ಕೇವಲ ಎರಡು ದಿನಗಳ ಹಿಂದಷ್ಟೇ ಕಲಬುರಗಿ ನಗರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಇದೇ ರೀತಿಯ ಘೋರ ಘಟನೆ ನಡೆದಿತ್ತು. ಬೆಳಗ್ಗೆ ಪಿಯುಸಿ ಪ್ರಥಮ ವರ್ಷದ ವಾಣಿಜ್ಯ ವಿಭಾಗದ ತರಗತಿಯಲ್ಲಿ ಪ್ರಾಧ್ಯಾಪಕರು ಪಾಠ ಮಾಡುತ್ತಿದ್ದ ವೇಳೆ, ಮೇಲ್ಛಾವಣಿಯ ಪ್ಲಾಸ್ಟರ್ ಏಕಾಏಕಿ ವಿದ್ಯಾರ್ಥಿನಿಯರ ಮೇಲೆ ಬಿದ್ದಿತ್ತು. ಆ ಸಮಯದಲ್ಲಿ ಕೊಠಡಿಯಲ್ಲಿ ಸುಮಾರು 80 ವಿದ್ಯಾರ್ಥಿನಿಯರು ಹಾಜರಿದ್ದರು.
ಮೇಲ್ಛಾವಣಿ ಪ್ಲಾಸ್ಟರ್ ಬಿದ್ದ ರಭಸಕ್ಕೆ ಪೂಜಾ, ಶೀತಲ್, ಸೃಷ್ಟಿ, ಸ್ನೇಹಾ ಹಾಗೂ ದಿವ್ಯಾ ಎಂಬ ವಿದ್ಯಾರ್ಥಿನಿಯರು ಗಾಯಗೊಂಡಿದ್ದರು. ಸಣ್ಣಪುಟ್ಟ ಗಾಯಗಳೊಂದಿಗೆ ವಿದ್ಯಾರ್ಥಿನಿಯರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಭಾರಿ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿತ್ತು.
ಕಳಪೆ ಕಾಮಗಾರಿ: ಶಾಸಕರ ಆಕ್ರೋಶ
ಘಟನೆ ನಡೆದ ತಕ್ಷಣವೇ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದ್ದರು. ಕಳಪೆ ಕಾಮಗಾರಿ ನಿರ್ವಹಿಸಿರುವ ಏಜೆನ್ಸಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಅವರು ಆಕ್ರೋಶ ವ್ಯಕ್ತಪಡಿಸಿದ್ದರು.
ಗಮನಾರ್ಹ ಸಂಗತಿಯೆಂದರೆ, ಈ ಸರ್ಕಾರಿ ಕಾಲೇಜು ಕಟ್ಟಡ ನಿರ್ಮಾಣವಾಗಿ ಕೇವಲ ಎಂಟು ವರ್ಷಗಳಷ್ಟೇ ಕಳೆದಿವೆ. ಕೆಲವು ದಿನಗಳ ಹಿಂದೆಯೂ ಇದೇ ರೀತಿ ಮೇಲ್ಛಾವಣಿಯ ಪ್ಲಾಸ್ಟರ್ ಕುಸಿದು ಬಿದ್ದಿತ್ತು ಎಂದು ತಿಳಿದುಬಂದಿದೆ. ಕಾಲೇಜಿನ ಬಹುತೇಕ ಕೊಠಡಿಗಳು ಸಂಪೂರ್ಣವಾಗಿ ಬೀಳುವ ಹಂತ ತಲುಪಿದ್ದು, ವಿದ್ಯಾರ್ಥಿಗಳು ಪ್ರತಿದಿನ ಜೀವವನ್ನು ಕೈಯಲ್ಲಿಡಿದುಕೊಂಡು ಪಾಠ ಕೇಳುವ ದುಸ್ಥಿತಿ ನಿರ್ಮಾಣವಾಗಿದೆ. ಕಟ್ಟಡಗಳ ಗುಣಮಟ್ಟ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
