ಕಲಬುರಗಿ: ಮಹಾರಾಷ್ಟ್ರ ಗಡಿಭಾಗ, ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಯಾದ್ಯಂತ ಸರಣಿ ಬೈಕ್ ಕಳ್ಳತನ ಮಾಡಿ ಪೊಲೀಸರಿಗೆ ತಲೆನೋವಾಗಿದ್ದ ಕುಖ್ಯಾತ ಕಳ್ಳನೊಬ್ಬನನ್ನು ಬಂಧಿಸುವಲ್ಲಿ ಕಲಬುರಗಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಫಜಲಪುರ ತಾಲೂಕಿನ ರೇವೂರ (ಬಿ) ಠಾಣಾ ಪೊಲೀಸರು ನಡೆಸಿದ ಈ ಚುರುಕಿನ ಕಾರ್ಯಾಚರಣೆಯಲ್ಲಿ ಬಂಧಿತನಿಂದ 2 ರಾಯಲ್ ಎನ್‌ಫೀಲ್ಡ್ ಬುಲೆಟ್ ಸೇರಿದಂತೆ ಒಟ್ಟು 18 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ.
ಯಾರು ಈ ಆರೋಪಿ? ಸಿಕ್ಕಿಬಿದ್ದಿದ್ದು ಹೇಗೆ?
ಬಂಧಿತ ಆರೋಪಿಯನ್ನು ಅಫಜಲಪುರ ತಾಲೂಕಿನ ಬಡದಾಳ ತಾಂಡಾದ ಸಂಜಯ ಖೇಮು ಚವ್ಹಾಣ ಎಂದು ಗುರುತಿಸಲಾಗಿದೆ. ಅತನೂರ ಗ್ರಾಮದ ನಂದಿ ಬಸವೇಶ್ವರ ದೇವಾಲಯದ ಬಳಿ ಭೀಮರಾಯ ಜಮಾದಾರ ಎಂಬುವರ ಬೈಕ್ ಕಳ್ಳತನವಾದ ಬಗ್ಗೆ ದೂರು ದಾಖಲಾಗಿತ್ತು. ಈ ಪ್ರಕರಣದ ಬೆನ್ನತ್ತಿದ ಪೊಲೀಸರು ಸಂಜಯ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಕೇವಲ ಸ್ಥಳೀಯವಾಗಿ ಮಾತ್ರವಲ್ಲದೆ ಕಲಬುರಗಿ ನಗರ, ವಿಜಯಪುರ, ಇಂಡಿ, ಸಾಲೋಟಗಿ, ಬೆಂಗಳೂರು ನಗರ ಹಾಗೂ ಮಹಾರಾಷ್ಟ್ರದ ದುಧನಿ, ಅಕ್ಕಲಕೋಟೆ ಭಾಗಗಳಲ್ಲೂ ಬೈಕ್ ಕದ್ದಿರುವುದಾಗಿ ಆರೋಪಿ ಬಾಯಿಬಿಟ್ಟಿದ್ದಾನೆ.
ಸಂತೆ, ಜಾತ್ರೆಗಳೇ ಟಾರ್ಗೆಟ್
ಆರೋಪಿ ಜನನಿಬಿಡ ಪ್ರದೇಶಗಳಾದ ಸಂತೆ, ಜಾತ್ರೆ ಮತ್ತು ಬಸ್ ನಿಲ್ದಾಣಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ಕದ್ದ ಬೈಕ್‌ಗಳನ್ನು ಅಫಜಲಪುರ ತಾಲೂಕಿನ ಮಲ್ಲಾಬಾದ್ ಗ್ರಾಮದ ಪರಶುರಾಮ ಅಲಿಯಾಸ್ ಸುನೀಲ್ ಎಂಬಾತನಿಗೆ ಕಮಿಷನ್ ಆಧಾರದ ಮೇಲೆ ಮಾರಾಟ ಮಾಡಲು ನೀಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಪರಶುರಾಮ ಶೇಖರಿಸಿಟ್ಟಿದ್ದ ಶೆಡ್‌ನಿಂದ ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ. ಸದ್ಯ ಪರಶುರಾಮ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.
ಮಟಕಾ ದಂಧೆಕೋರರಿಗೆ ಖಡಕ್ ಎಚ್ಚರಿಕೆ
ಈ ಯಶಸ್ವಿ ಕಾರ್ಯಾಚರಣೆ ನಡೆಸಿದ ಆಳಂದ ಡಿವೈಎಸ್‌ಪಿ ತಮ್ಮರಾಯ ಪಾಟೀಲ್, ಸಿಪಿಐ ಚನ್ನಯ್ಯ ಹಿರೇಮಠ ಹಾಗೂ ಪಿಎಸ್‌ಐ ವಾತ್ಸಲ್ಯ ಅವರ ತಂಡಕ್ಕೆ ಎಸ್ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಎಚ್ಚರಿಕೆ ನೀಡಿರುವ ಎಸ್ಪಿ ಶ್ರೀನಿವಾಸಲು, “ಗಡಿಭಾಗದ ಹಳ್ಳಿಗಳಲ್ಲಿ ಮಟಕಾ ಮತ್ತು ಇಸ್ಪೀಟ್ ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ನಿರ್ಭೀತಿಯಿಂದ ಮಾಹಿತಿ ನೀಡಬೇಕು” ಎಂದು ಮನವಿ ಮಾಡಿದ್ದಾರೆ.
