ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ನಟಿ ರಶ್ಮಿ ಲೀಲಾ ಇಂದು ವಿಧಿವಶರಾಗಿದ್ದಾರೆ. ಕಳೆದ ಆರು ವರ್ಷಗಳಿಂದ ಮಾರಣಾಂತಿಕ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಇಹಲೋಕ ತ್ಯಜಿಸಿದ್ದಾರೆ.
ರಶ್ಮಿ ಲೀಲಾ ಅವರು 2019 ರಿಂದ ‘ಪಲ್ಮನರಿ ಫೈಬ್ರೋಸಿಸ್’ (Pulmonary Fibrosis) ಎಂಬ ಗಂಭೀರ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ದಿನಕಳೆದಂತೆ ಉಸಿರಾಟದ ಸಮಸ್ಯೆ ಹೆಚ್ಚಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಈ ಕಾಯಿಲೆಯಿಂದ ಗುಣಮುಖರಾಗಲು ಶ್ವಾಸಕೋಶದ ಕಸಿ (Lung Transplant) ಮಾಡಿಸಿಕೊಳ್ಳುವುದು ಅನಿವಾರ್ಯವಾಗಿತ್ತು.
ಎಲ್ಲರ ಸಹಕಾರದಿಂದ ಚಿಕಿತ್ಸೆ ಪಡೆದು ಗುಣಮುಖರಾಗಿ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಮತ್ತು ಕುಟುಂಬಕ್ಕೆ ಇಂದು ಆಘಾತಕಾರಿ ಸುದ್ದಿ ಎದುರಾಗಿದೆ. ರಶ್ಮಿ ಅವರ ನಿಧನದ ಸುದ್ದಿಯನ್ನು ಪತಿ ಸಾರಕ್ಕಿ ಮಂಜು ಅವರು ಹಂಚಿಕೊಂಡಿದ್ದು, ಕಿರುತೆರೆ ಕಲಾವಿದರು ಕಂಬನಿ ಮಿಡಿಯುತ್ತಿದ್ದಾರೆ.
ರಶ್ಮಿ ಲೀಲಾ ಅವರು ಹಲವು ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳ ಮೂಲಕ ಮನೆಮಾತಾಗಿದ್ದರು. ಸರಳ ಸ್ವಭಾವದ ಅವರು ಕಿರುತೆರೆ ಕಲಾವಿದರ ನಡುವೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.
