S Shorts

ವಿಧಾನಸೌಧದಲ್ಲಿ ಅವಧಿಗೂ ಮುನ್ನವೇ ಶಾಸಕರ Photoshoot: CM ಬದಲಾವಣೆಯ ಸುಳಿವೇ ಅಥವಾ ಯು.ಟಿ.ಖಾದರ್ ಸಂಪುಟ ಸೇರ್ಪಡೆಯೇ?

ವಿಧಾನಸೌಧದಲ್ಲಿ ಅವಧಿಗೂ ಮುನ್ನವೇ ಶಾಸಕರ Photoshoot: CM ಬದಲಾವಣೆಯ ಸುಳಿವೇ ಅಥವಾ ಯು.ಟಿ.ಖಾದರ್ ಸಂಪುಟ ಸೇರ್ಪಡೆಯೇ?
Author: Sagaradventure
Posted By: Sagaradventure
Updated: Mar 25, 2026 | 5:16 PM

ಕರ್ನಾಟಕ ವಿಧಾನಸಭೆಯ 5 ವರ್ಷಗಳ ಅಧಿಕಾರಾವಧಿ ಮುಗಿಯುವ ಮುನ್ನವೇ, ಅಂದರೆ ಬುಧವಾರ (ಮಾರ್ಚ್ 25 ರಂದು) 16 ನೇ ವಿಧಾನಸಭೆಯ ಶಾಸಕರ ಸಾಂಪ್ರದಾಯಿಕ ಫೋಟೋ ಶೂಟ್ ನಡೆದಿರುವುದು ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಸಾಮಾನ್ಯವಾಗಿ ಐದು ವರ್ಷಗಳ ಕಲಾಪ ಮುಕ್ತಾಯದ ಹಂತದಲ್ಲಿ ಇಂತಹ ಫೋಟೋ ಶೂಟ್ ನಡೆಯುವುದು ವಾಡಿಕೆ. ಆದರೆ, ಸ್ಪೀಕರ್ ಯು.ಟಿ. ಖಾದರ್ ಅವರು ಅವಧಿಗಿಂತ ಮೊದಲೇ ಈ ಕಾರ್ಯಕ್ರಮ ಆಯೋಜಿಸಿರುವುದು ದಿಢೀರ್ ರಾಜಕೀಯ ಊಹಾಪೋಹಗಳಿಗೆ ಕಾರಣವಾಗಿದೆ.

ರಾಜ್ಯದಲ್ಲಿ ಉಪಚುನಾವಣೆಯ ಕಾವು ಜೋರಾಗಿದ್ದು, ಫಲಿತಾಂಶದ ಬೆನ್ನಲ್ಲೇ ಸಚಿವ ಸಂಪುಟದ ಮಹತ್ವದ ಪುನರ್‌ರಚನೆ ನಡೆಯಲಿದೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ. ಅದರಲ್ಲೂ ವಿಶೇಷವಾಗಿ ಸ್ಪೀಕರ್ ಯು.ಟಿ. ಖಾದರ್ ಅವರು ಸಭಾಧ್ಯಕ್ಷ ಸ್ಥಾನದಿಂದ ಕೆಳಗಿಳಿದು ಸಚಿವ ಸಂಪುಟ ಸೇರ್ಪಡೆಯಾಗುವ ಸಾಧ್ಯತೆಗಳಿದ್ದು, ಈ ಕಾರಣಕ್ಕಾಗಿಯೇ ಅವಸರದಲ್ಲಿ ಫೋಟೋ ಶೂಟ್ ಮಾಡಲಾಗಿದೆ ಎನ್ನಲಾಗುತ್ತಿದೆ. ಮತ್ತೊಂದೆಡೆ, ವಿರೋಧ ಪಕ್ಷವಾದ ಬಿಜೆಪಿ ಇದು “ಸಿಎಂ ಸಿದ್ದರಾಮಯ್ಯ ಅವರ ಔಟ್ ಗೋಯಿಂಗ್ ಫೋಟೋ ಶೂಟ್” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಲೇವಡಿ ಮಾಡುವ ಮೂಲಕ ಹೊಸ ಬಾಂಬ್ ಸಿಡಿಸಿದೆ.

ಈ ದಿಢೀರ್ ಬೆಳವಣಿಗೆಯನ್ನು ಪ್ರಶ್ನಿಸಿರುವ ಹಿರಿಯ ಬಿಜೆಪಿ ಶಾಸಕ ಸುರೇಶ್ ಕುಮಾರ್, ಫೇಸ್‌ಬುಕ್‌ನಲ್ಲಿ ಸುದೀರ್ಘ ಪೋಸ್ಟ್ ಹಾಕುವ ಮೂಲಕ ಸ್ಪೀಕರ್ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಿವಂಗತ ಕೆಂಗಲ್ ಹನುಮಂತಯ್ಯನವರು ಕೇವಲ 1.50 ಕೋಟಿ ರೂಪಾಯಿ ವೆಚ್ಚದಲ್ಲಿ ಭವ್ಯ ವಿಧಾನಸೌಧ ನಿರ್ಮಿಸಿದ್ದರು. ಆದರೆ, ಅದೇ ಕಟ್ಟಡಕ್ಕೆ 84 ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಸ ಬಾಗಿಲು ಹಾಕಿಸಿದ ಹೆಗ್ಗಳಿಕೆ ಸ್ಪೀಕರ್ ಖಾದರ್ ಅವರದ್ದು. ಹಳೆಯ ಬಾಗಿಲು ಹಾಳಾಗಿತ್ತೇ ಅಥವಾ ಯಾರಾದರೂ ಬದಲಾಯಿಸಲು ಕೇಳಿದ್ದರೇ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ. 2028 ರ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ನಡೆಯಬೇಕಿದ್ದ ಈ ಗ್ರೂಪ್ ಫೋಟೋವನ್ನು ಈಗಲೇ, ಅಂದರೆ 2026 ರ ಮಾರ್ಚ್ 25 ರಂದೇ ಮಾಡುವ ತುರ್ತು ಏನಿತ್ತು ಎಂದು ಅವರು ಗುಡುಗಿದ್ದಾರೆ.

ಈ ಅಕಾಲಿಕ ಫೋಟೋ ಶೂಟ್‌ಗೆ ಪ್ರಮುಖವಾಗಿ 3 ಕಾರಣಗಳಿರಬಹುದು ಎಂದು ಸುರೇಶ್ ಕುಮಾರ್ ತಮ್ಮ ಪೋಸ್ಟ್‌ನಲ್ಲಿ ವಿಶ್ಲೇಷಿಸಿದ್ದಾರೆ. ಅಧಿವೇಶನದ ಬಳಿಕ ಖಾದರ್ ಅವರು ಸಭಾಧ್ಯಕ್ಷ ಸ್ಥಾನ ತೊರೆದು ಸಚಿವರಾಗುವ ಇರಾದೆ ಹೊಂದಿರಬಹುದು, ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಬದಲಾಗುವ ಸಾಧ್ಯತೆಗಳಿದ್ದು ಅವರು ಸಿಎಂ ಆಗಿರುವಾಗಲೇ ಒಂದು ನೆನಪಿನ ಚಿತ್ರ ಇರಲಿ ಎಂಬ ಉದ್ದೇಶವಿರಬಹುದು. ಇದಲ್ಲದೆ, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಏನಾದರೂ ಎದುರಾಗಲಿದೆಯೇ ಎಂಬ ಗಂಭೀರ ಅನುಮಾನಗಳನ್ನೂ ಅವರು ಮುಂದಿಟ್ಟು ಸರ್ಕಾರದ ಕಾಲೆಳೆದಿದ್ದಾರೆ.