S Shorts

Karnataka Assembly | ದಕ್ಷಿಣ ಕನ್ನಡ ಇನ್ಮುಂದೆ ‘ಮಂಗಳೂರು ಜಿಲ್ಲೆ’ ಆಗಲಿ: ಅಸೆಂಬ್ಲಿಯಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್ ಒತ್ತಾಯ

Karnataka Assembly | ದಕ್ಷಿಣ ಕನ್ನಡ ಇನ್ಮುಂದೆ ‘ಮಂಗಳೂರು ಜಿಲ್ಲೆ’ ಆಗಲಿ: ಅಸೆಂಬ್ಲಿಯಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್ ಒತ್ತಾಯ
Author: Meghana Gowda
Posted By: Meghana Gowda
Updated: Mar 23, 2026 | 3:57 PM

ಬೆಂಗಳೂರು: ವಿಧಾನಸಭೆಯಲ್ಲಿ ಮುಂದುವರೆದ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್ (Umanath Kotian) ಅವರು, ಶಿಕ್ಷಣ ವ್ಯವಸ್ಥೆ, ಭಾಷಾ ಪ್ರೇಮ ಮತ್ತು ಜಿಲ್ಲಾ ನಾಮಕರಣದ ಬಗ್ಗೆ ಮಹತ್ವದ ಪ್ರಸ್ತಾಪಗಳನ್ನು ಮಾಡಿದರು.

ಶಾಸಕರು ಇಡೀ ಕರಾವಳಿ ಭಾಗದ ಶಾಸಕರ ಪರವಾಗಿ ಎರಡು ಪ್ರಮುಖ ಬೇಡಿಕೆಗಳನ್ನು ಮಂಡಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಬದಲಾಯಿಸಿ, ಅದನ್ನು ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡಬೇಕು. ಹಾಗೂ   ಕರಾವಳಿಯ ಜೀವನಾಡಿಯಾಗಿರುವ ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ  ಕನ್ನಡ ಶಾಲೆಗಳು ಮುಚ್ಚುತ್ತಿರುವ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದ ಅವರು, ಇಂದಿನ ಮಕ್ಕಳಿಗೆ ಡ್ಯಾಡಿ, ಮಮ್ಮಿ ಬಿಟ್ಟರೆ ದೊಡ್ಡಪ್ಪ, ಚಿಕ್ಕಪ್ಪ, ಚಿಕ್ಕಮ್ಮ ಎಂಬ ಸಂಬಂಧಗಳೇ ತಿಳಿಯುತ್ತಿಲ್ಲ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಸಿಕ್ಕರೆ ಮಾತ್ರ ಉತ್ತಮ ಸಂಸ್ಕೃತಿ ಸಿಗಲು ಸಾಧ್ಯ. ರಾಜ್ಯ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ಕೈಬಿಟ್ಟಿರುವುದನ್ನು ಸರಿಯಲ್ಲ. “ಗಾಂಧಿ-ನೆಹರೂ ಹೊರತುಪಡಿಸಿ ಸಮಾಜಕ್ಕೆ ಶ್ರಮಿಸಿದ ಇತರ ಮಹನೀಯರ ಬಗ್ಗೆ ಮಕ್ಕಳಿಗೆ ತಿಳಿಯಬೇಕಾದರೆ ರಾಷ್ಟ್ರೀಯ ಶಿಕ್ಷಣ ನೀತಿಯ ಅನಿವಾರ್ಯತೆ ಇದೆ” ಎಂದು ಪ್ರತಿಪಾದಿಸಿದರು.

ಮೂಡಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಯು ಸಾವಿರಾರು ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿ ಉಚಿತ ಶಿಕ್ಷಣ ನೀಡುತ್ತಿರುವುದನ್ನು ಶ್ಲಾಘಿಸಿದ ಅವರು, ಸರ್ಕಾರಿ ಕನ್ನಡ ಶಾಲೆಗಳಿಗೂ ಗುಣಮಟ್ಟದ ಶಿಕ್ಷಕರನ್ನು ನೀಡಬೇಕು ಎಂದು ಮನವಿ ಮಾಡಿದರು.