S Shorts

ಮುಖ್ಯಮಂತ್ರಿ ಆಯ್ಕೆ ಕಸರತ್ತು: ನಾಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮಹತ್ವದ ಸಭೆ; ಶಾಸಕರಿಗೆ ಡಿಕೆಶಿ ಕೊಟ್ಟ ಖಡಕ್ ಸೂಚನೆ ಏನು?

ಮುಖ್ಯಮಂತ್ರಿ ಆಯ್ಕೆ ಕಸರತ್ತು: ನಾಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮಹತ್ವದ ಸಭೆ; ಶಾಸಕರಿಗೆ ಡಿಕೆಶಿ ಕೊಟ್ಟ ಖಡಕ್ ಸೂಚನೆ ಏನು?
Author: Sagaradventure
Posted By: Sagaradventure
Updated: May 29, 2026 | 4:04 PM

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಆಯ್ಕೆ ಹಾಗೂ ನೂತನ ಸಚಿವ ಸಂಪುಟ ರಚನೆಯ ಕಸರತ್ತು ತೀವ್ರಗೊಂಡಿದ್ದು, ದೆಹಲಿಯಲ್ಲಿ ಬೀಡುಬಿಟ್ಟಿರುವ ಡಿ.ಕೆ. ಶಿವಕುಮಾರ್ ಕಳೆದ ಎರಡ್ಮೂರು ದಿನಗಳ ತಮ್ಮ ಮೌನವನ್ನು ಕೊನೆಗೂ ಮುರಿದಿದ್ದಾರೆ. ಮುಖ್ಯಮಂತ್ರಿ ಹುದ್ದೆಯ ಬೆಳವಣಿಗೆಗಳ ಬೆನ್ನಲ್ಲೇ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿರುವ ಅವರು, ದೆಹಲಿಯಲ್ಲಿ ಮಾಧ್ಯಮಗಳಿಗೆ ಮೊದಲ ಬಾರಿಗೆ ಅಧಿಕೃತ ಪ್ರತಿಕ್ರಿಯೆ ನೀಡಿದ್ದಾರೆ. ನಾಳೆ (ಮೇ 30) ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ ಪಿ) ಸಭೆಯನ್ನು ಕರೆಯಲಾಗಿದೆ ಎಂದು ಅವರು ಘೋಷಣೆ ಮಾಡಿದ್ದು, ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದಾರೆ.

ಶಾಸಕಾಂಗ ಪಕ್ಷದ ಸಭೆಯ ಆಯೋಜನೆ ಕುರಿತಂತೆ ತಾವು ಈಗಾಗಲೇ ಸಿದ್ದರಾಮಯ್ಯನವರ ಜೊತೆಯೂ ಚರ್ಚೆ ಮಾಡಿರುವುದಾಗಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಾಯಕರು, ವೀಕ್ಷಕರು ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಈ ಮಹತ್ವದ ಸಭೆಗೆ ಆಗಮಿಸಬೇಕಿದೆ. ಹೀಗಾಗಿ, ದೆಹಲಿ ನಾಯಕರು ಸಮಯವನ್ನು ನಿಗದಿಪಡಿಸಿದ ಬಳಿಕ ವಿಧಾನಸೌಧದಲ್ಲಿ ನಡೆಯಲಿರುವ ಸಭೆಯ ನಿಖರವಾದ ಸಮಯವನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಪಕ್ಷದ ಶಾಸಕರಿಗೆ ಖಡಕ್ ಸಂದೇಶ ರವಾನಿಸಿರುವ ಡಿಕೆಶಿ, ಯಾವುದೇ ಕಾರಣಕ್ಕೂ ಶಾಸಕರು ದೆಹಲಿಗೆ ಬರುವುದು ಬೇಡ, ಬದಲಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಬೆಂಗಳೂರಿನಲ್ಲೇ ಹಾಜರಿರುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮೊದಲ ಹಂತವಾಗಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಸಂಪೂರ್ಣಗೊಳ್ಳಬೇಕು, ಆ ಬಳಿಕವಷ್ಟೇ ಪ್ರಮಾಣ ವಚನ ಸ್ವೀಕಾರ ಸಮಾರಂಭದ ದಿನಾಂಕ ನಿಗದಿಯಾಗಲಿದೆ. ನಾಳಿನ ಸಿಎಲ್ ಪಿ ಸಭೆಯ ನಂತರವೇ ಮುಂದಿನ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು, ಸದ್ಯಕ್ಕೆ ಬೇರೆ ಯಾವುದೇ ವಿಚಾರಗಳು ಅಂತಿಮವಾಗಿಲ್ಲ ಎಂದು ಅವರು ದೆಹಲಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.