S Shorts

ರಾಜ್ಯ ಸರ್ಕಾರಕ್ಕೆ High Court ಬಿಗ್ ಶಾಕ್: ಜನೌಷಧಿ ಕೇಂದ್ರ ಮುಚ್ಚುವ ಆದೇಶ ರದ್ದು!

ರಾಜ್ಯ ಸರ್ಕಾರಕ್ಕೆ High Court ಬಿಗ್ ಶಾಕ್: ಜನೌಷಧಿ ಕೇಂದ್ರ ಮುಚ್ಚುವ ಆದೇಶ ರದ್ದು!
Author: Sagaradventure
Posted By: Sagaradventure
Updated: Dec 11, 2025 | 6:03 AM

ಧಾರವಾಡ: ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹೈಕೋರ್ಟ್‌ನಲ್ಲಿ ಮುಖಭಂಗವಾಗಿದೆ. ಕೇವಲ ಆದೇಶವನ್ನು ರದ್ದುಗೊಳಿಸಿದ್ದು ಮಾತ್ರವಲ್ಲದೆ, ರಾಜ್ಯ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳ ಕುರಿತೂ ಧಾರವಾಡ ಹೈಕೋರ್ಟ್ ಪೀಠದ ನ್ಯಾಯಮೂರ್ತಿಗಳು ತೀಕ್ಷ್ಣ ಪ್ರಶ್ನೆಗಳನ್ನು ಕೇಳುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.

​ಕಳೆದ ಮೇ 14 ರಂದು ರಾಜ್ಯ ಸರ್ಕಾರವು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಜನೌಷಧಿ ಕೇಂದ್ರಗಳನ್ನು ತೆರವುಗೊಳಿಸುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ಸರ್ಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

“ಈ ಪ್ರಕರಣ ಯಾಕೆ ಕೋರ್ಟ್‌ ಮೆಟ್ಟಿಲೇರುವಂತೆ ಆಯಿತು? ಬಡವರಿಗೆ ಅಗ್ಗದ ದರದಲ್ಲಿ ಸಿಗುವ ಜನೌಷಧಿ ಕೇಂದ್ರಗಳಿಗೆ ಅವಕಾಶ ಕೊಡದಿದ್ದರೆ, ನಿಮಗೆ ಜನರ ಬಗ್ಗೆ ಕಾಳಜಿ ಇಲ್ಲ ಎಂದರ್ಥವಾಗುತ್ತದೆ” ಎಂದು ನ್ಯಾಯಮೂರ್ತಿಗಳು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

​ವಿಚಾರಣೆ ವೇಳೆ ಸರ್ಕಾರದ ನಡೆಯನ್ನು ಪ್ರಶ್ನಿಸಿದ ನ್ಯಾಯಮೂರ್ತಿಗಳು, “ಜನೌಷಧಿ ಕೇಂದ್ರಗಳ ಬಗ್ಗೆ ಯಾರಾದರೂ ದೂರು ಕೊಟ್ಟಿದ್ದಾರಾ? ಕೇವಲ 120 ಚದರಡಿಯಲ್ಲಿ ಜನೌಷಧಿ ಕೇಂದ್ರ ಇಟ್ಟರೆ ಸರ್ಕಾರಕ್ಕೆ ಏನು ನಷ್ಟವಾಗುತ್ತದೆ?” ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆಯೂ ಪ್ರಸ್ತಾಪಿಸಿದ ಕೋರ್ಟ್, “ಫ್ರೀ ಬಸ್ (ಶಕ್ತಿ ಯೋಜನೆ) ಮಾಡಿ ಎಂದು ನಿಮಗೆ ಯಾರು ಹೇಳಿದ್ದರು? ಯಾರೂ ಕೇಳದಿದ್ದರೂ ಯೋಜನೆಗಳನ್ನು ಜಾರಿ ಮಾಡುತ್ತೀರಿ, ಆದರೆ ಬಡವರಿಗೆ ಅನುಕೂಲವಾಗುವ ಔಷಧ ಕೇಂದ್ರಗಳನ್ನು ಮುಚ್ಚಲು ಹೊರಟಿದ್ದೀರಿ” ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

​ಅಂತಿಮವಾಗಿ, ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧಿ ಕೇಂದ್ರಗಳನ್ನು ಮುಚ್ಚುವಂತೆ ಸರ್ಕಾರ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಈ ಮೂಲಕ ಬಡ ರೋಗಿಗಳ ಹಿತಾಸಕ್ತಿಯನ್ನು ಎತ್ತಿಹಿಡಿದಿದ್ದು, ರಾಜ್ಯ ಸರ್ಕಾರಕ್ಕೆ ದೊಡ್ಡ ಮಟ್ಟದ ಕಾನೂನು ಮತ್ತು ನೈತಿಕ ಹಿನ್ನೆಡೆಯಾಗಿದೆ.