ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಾರ್ವಜನಿಕರೇ ಗಮನಿಸಿ, ನಾಳೆಯಿಂದ ನಗರದಲ್ಲಿ ನಿಮ್ಮ ನೆಚ್ಚಿನ ಕಾಫಿ, ಟೀ, ಬೇಕರಿ ತಿಂಡಿಗಳು ಅಥವಾ ಬಿಸ್ಕೆಟ್‌ಗಳು ಸಿಗುವುದು ಕಷ್ಟವಾಗಲಿದೆ. ವಿವಿಧ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆಯಿಂದ ನಗರದಾದ್ಯಂತ ಬೇಕರಿ ಮತ್ತು ಕಾಂಡಿಮೆಂಟ್ಸ್ ಅಂಗಡಿಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ವ್ಯಾಪಾರಿಗಳು ತೀರ್ಮಾನಿಸಿದ್ದಾರೆ.
ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳ ನಿರಂತರ ಕಿರುಕುಳ ಹಾಗೂ ಸ್ಥಳೀಯ ಪೌಡಿ ರೌಡಿಗಳ ದಬ್ಬಾಳಿಕೆಯನ್ನು ಖಂಡಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕಾರ್ಮಿಕ ಪರಿಷತ್ ವತಿಯಿಂದ ಈ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಬೇಕರಿಗಳು, ಕಾಂಡಿಮೆಂಟ್ಸ್‌ಗಳು, ಟೀ ಸ್ಟಾಲ್‌ಗಳು ಹಾಗೂ ಸಣ್ಣ ಉಪಹಾರ ಕೇಂದ್ರಗಳು ನಾಳೆಯಿಂದ ವ್ಯಾಪಾರವನ್ನು ಸ್ಥಗಿತಗೊಳಿಸಲಿವೆ. ಮುಖ್ಯವಾಗಿ ತಳಮಟ್ಟದ ವ್ಯಾಪಾರಿಗಳಿಂದ ನಡೆಯುತ್ತಿರುವ ಹಫ್ತಾ ವಸೂಲಿ ದಬ್ಬಾಳಿಕೆ ತಕ್ಷಣವೇ ನಿಲ್ಲಬೇಕು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ನೀಡುತ್ತಿರುವ ಭಾರಿ ಕಿರುಕುಳಕ್ಕೆ ಬ್ರೇಕ್ ಬೀಳಬೇಕು ಎಂದು ವ್ಯಾಪಾರಿಗಳು ಆಗ್ರಹಿಸಿದ್ದಾರೆ.
ಈ ಹೋರಾಟದಲ್ಲಿ ತಂಬಾಕು ಉತ್ಪನ್ನಗಳ ಮಾರಾಟದ ಕುರಿತೂ ಪ್ರಮುಖ ಬೇಡಿಕೆ ಇಡಲಾಗಿದೆ. ಒಂದೋ ತಂಬಾಕು ಉತ್ಪನ್ನಗಳ ಮುಕ್ತ ಮಾರಾಟಕ್ಕೆ ಸೂಕ್ತ ಅವಕಾಶ ನೀಡಬೇಕು, ಇಲ್ಲದಿದ್ದರೆ ಅಂತಹ ಉತ್ಪನ್ನಗಳ ಮಾರಾಟವನ್ನು ಸಂಪೂರ್ಣವಾಗಿ ಬ್ಯಾನ್ ಮಾಡಬೇಕು ಎಂದು ವ್ಯಾಪಾರಿಗಳು ಒತ್ತಾಯಿಸಿದ್ದಾರೆ.
ನಾಳೆ ಮುಂಜಾನೆಯಿಂದಲೇ ಬೆಂಗಳೂರು ನಗರದಾದ್ಯಂತ ಬರೋಬ್ಬರಿ ಐದು ಸಾವಿರಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಗಾತ್ರದ ಕಾಂಡಿಮೆಂಟ್ಸ್ ಹಾಗೂ ಬೇಕರಿ ಅಂಗಡಿಗಳು ಮುಚ್ಚಲ್ಪಡುವ ಸಾಧ್ಯತೆ ದಟ್ಟವಾಗಿದೆ. ಇದರ ನೇರ ಪರಿಣಾಮ ಪ್ರತಿದಿನ ಗಲ್ಲಿ ಗಲ್ಲಿಗಳ ಬೇಕರಿಗಳ ಮುಂದೆ ನಿಂತು ಬಿಸಿಬಿಸಿ ಕಾಫಿ, ಟೀ ಹಾಗೂ ತಿಂಡಿ ಸವಿಯುತ್ತಿದ್ದ ಸಾರ್ವಜನಿಕರ ಮೇಲೆ ಬೀರಲಿದ್ದು, ಜನಸಾಮಾನ್ಯರಿಗೆ ಭಾರಿ ನಿರಾಸೆಯಾಗುವ ಸಾಧ್ಯತೆ ಇದೆ.
