ಕರ್ನಾಟಕದಲ್ಲಿ ಮುಂಗಾರು ಚುರುಕುಗೊಂಡಿದ್ದು, ಸೆಪ್ಟೆಂಬರ್ 20 ರ ಬೆಳಿಗ್ಗೆ 8 ಗಂಟೆಯವರೆಗಿನ ಹವಾಮಾನ ವರದಿಯಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ತೀರದ ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಗಳ ಅಲ್ಲಲ್ಲಿ ಹಾಗೂ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಮಧ್ಯಾಹ್ನದ ನಂತರ ಮತ್ತು ಸಂಜೆಯ ವೇಳೆಗೆ ಗುಡುಗು ಸಹಿತ ಮಳೆ ಸುರಿಯುವ ನಿರೀಕ್ಷೆಯಿದೆ.
ಕರಾವಳಿ ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿಯಲಿದ್ದು, ಸೆಪ್ಟೆಂಬರ್ 22 ರಿಂದ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದೇ ವೇಳೆ ಮಲೆನಾಡು ಭಾಗದ ಕೊಡಗು, ಹಾಸನದ ಸಕಲೇಶಪುರ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಸಂಜೆಯ ವೇಳೆ ಗುಡುಗು ಸಹಿತ ಮಳೆಯಾಗಲಿದ್ದು, ಸೆಪ್ಟೆಂಬರ್ 22 ರಿಂದ ಸತತ 3 ದಿನಗಳ ಕಾಲ ಮಳೆ ಬಿರುಸುಗೊಂಡು ಸೆಪ್ಟೆಂಬರ್ 25 ರವರೆಗೆ ಮುಂದುವರಿಯಲಿದೆ.
ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಮಳೆ ಆರ್ಭಟ ಮುಂದುವರಿಯಲಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ವಿಜಯಪುರ, ಕಲಬುರ್ಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಮಧ್ಯಾಹ್ನದ ನಂತರ, ಸಂಜೆ ಮತ್ತು ರಾತ್ರಿಯ ವೇಳೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಹಾವೇರಿ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯಾಗುವ ಲಕ್ಷಣಗಳಿದ್ದು, ಉತ್ತರ ಒಳನಾಡಿನಲ್ಲಿ ಸೆಪ್ಟೆಂಬರ್ 23 ಅಥವಾ 24 ರವರೆಗೆ ಮಳೆ ಮುಂದುವರಿಯಲಿದೆ.
ಇನ್ನು ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ಪಾವಗಡ ಸೇರಿದಂತೆ ತುಮಕೂರು, ಚಿತ್ರದುರ್ಗ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳ ಹಲವೆಡೆ ಸಂಜೆ ಮತ್ತು ರಾತ್ರಿ ಗುಡುಗು ಸಹಿತ ಮಳೆಯಾಗಲಿದ್ದು, ಬಹುತೇಕ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 25 ರವರೆಗೆ ಈ ವಾತಾವರಣ ಮುಂದುವರಿಯಲಿದೆ.
ಬಂಗಾಳಕೊಲ್ಲಿಯ ಮ್ಯಾನ್ಮಾರ್ ಪಶ್ಚಿಮ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಮತ್ತಷ್ಟು ತೀವ್ರಗೊಂಡು, ಸೆಪ್ಟೆಂಬರ್ 22 ರ ಸುಮಾರಿಗೆ ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ಎಲ್ಲಾ ಲಕ್ಷಣಗಳಿವೆ. ಈ ಸೈಕ್ಲೋನ್ ಸೆಪ್ಟೆಂಬರ್ 24 ರ ರಾತ್ರಿ ಆಂಧ್ರಪ್ರದೇಶ ಹಾಗೂ ಒಡಿಶಾ ಗಡಿ ಭಾಗಗಳಲ್ಲಿ ಭೂ ಪ್ರವೇಶ (ಲ್ಯಾಂಡ್‌ಫಾಲ್) ಮಾಡುವ ಸಾಧ್ಯತೆಯಿದ್ದು, ತದನಂತರ ಸೆಪ್ಟೆಂಬರ್ 27 ರ ವೇಳೆಗೆ ಮಹಾರಾಷ್ಟ್ರದವರೆಗೆ ಸಾಗಿ ದುರ್ಬಲಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದೇ ಸಂದರ್ಭದಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರ ಗಡಿ ಭಾಗಗಳಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಕಂಡುಬಂದಿದ್ದರೂ, ಅದು ಉತ್ತರ ಭಾರತದ ಕಡೆಯಿಂದ ಒಣ ಹವೆಯ ಶುಷ್ಕ ಗಾಳಿಯನ್ನು ಸೆಳೆಯುತ್ತಿರುವುದರಿಂದ ಆ ಭಾಗದಲ್ಲಿ ಹೆಚ್ಚಿನ ಮಳೆಯ ನಿರೀಕ್ಷೆಯಿಲ್ಲ.
