S Shorts

ಪದೇ ಪದೇ ದಾಖಲೆ ತೋರಿಸುವ ಕಿರಿಕಿರಿಯಿಲ್ಲ: Kempegowda ಏರ್‌ಪೋರ್ಟ್‌ನ ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ಬಂತು ‘ಡಿಜಿ ಯಾತ್ರಾ’!

ಪದೇ ಪದೇ ದಾಖಲೆ ತೋರಿಸುವ ಕಿರಿಕಿರಿಯಿಲ್ಲ: Kempegowda ಏರ್‌ಪೋರ್ಟ್‌ನ ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ಬಂತು ‘ಡಿಜಿ ಯಾತ್ರಾ’!
Author: Sagaradventure
Posted By: Sagaradventure
Updated: Oct 27, 2026 | 6:10 PM

ಬೆಂಗಳೂರು: ದೇಶೀಯ ವಿಮಾನ ಪ್ರಯಾಣಿಕರಿಗೆ ತಡೆರಹಿತ ಹಾಗೂ ಸುಗಮ ಪ್ರಯಾಣದ ಅನುಭವ ನೀಡುತ್ತಿರುವ ‘ಡಿಜಿ ಯಾತ್ರಾ’ ಸೌಲಭ್ಯವನ್ನು ಇದೀಗ ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ವಿಸ್ತರಣೆ ಮಾಡಲಾಗುತ್ತಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಆಯ್ದ ಅಂತಾರಾಷ್ಟ್ರೀಯ ವಿಮಾನಗಳ ನಿರ್ಗಮನಕ್ಕಾಗಿ ‘ಡಿಜಿ ಯಾತ್ರಾ – ಇಂಟರ್ನ್ಯಾಷನಲ್ ಪ್ಯಾಸೆಂಜರ್ ಟ್ರಯಲ್ಸ್’ ಎಂಬ ಪ್ರಾಯೋಗಿಕ ಸೇವೆಗೆ ಚಾಲನೆ ನೀಡಿದೆ.

ಈ ಮೂಲಕ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಪದೇ ಪದೇ ದಾಖಲೆಗಳನ್ನು ತೋರಿಸುವ ಕಿರಿಕಿರಿಯನ್ನು ತಪ್ಪಿಸಿ, ಮುಖ ಗುರುತಿಸುವಿಕೆ (ಫೇಸ್ ರೆಕಗ್ನಿಷನ್) ತಂತ್ರಜ್ಞಾನದ ಮೂಲಕ ಸುಲಭವಾಗಿ ವಿಮಾನ ನಿಲ್ದಾಣದೊಳಗೆ ಪ್ರವೇಶಿಸಬಹುದಾಗಿದೆ.

ಪ್ರಕ್ರಿಯೆ ಹೇಗಿರಲಿದೆ?

ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಹೊರಟ ಪ್ರಯಾಣಿಕರು ಡಿಜಿ ಯಾತ್ರಾ ಆ್ಯಪ್‌ನಲ್ಲಿ ತಮ್ಮ ಇ-ಪಾಸ್‌ಪೋರ್ಟ್ ಚಿಪ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಮೌಲ್ಯೀಕರಿಸಬೇಕು. ಆನಂತರ ಫೋಟೋ ವೆರಿಫಿಕೇಶನ್ ನಡೆಯುತ್ತದೆ. ಈ ಪ್ರಕ್ರಿಯೆಯು ಪೂರ್ಣಗೊಂಡ ಬಳಿಕ ಪ್ರಯಾಣಿಕರ ಸುರಕ್ಷಿತ ಡಿಜಿಟಲ್ ಗುರುತು ಸೃಷ್ಟಿಯಾಗುತ್ತದೆ. 

ಇದನ್ನು ಬಳಸಿಕೊಂಡು ವಿಮಾನ ನಿಲ್ದಾಣದ ವಿವಿಧ ತಪಾಸಣಾ ಹಂತಗಳಲ್ಲಿ ಬಯೋಮೆಟ್ರಿಕ್ ಮೂಲಕ ಯಾವುದೇ ಸಂಪರ್ಕವಿಲ್ಲದೆ, ಗೌಪ್ಯತೆ ಕಾಪಾಡಿಕೊಂಡು ಸುಗಮವಾಗಿ ಪ್ರಯಾಣ ಮುಂದುವರಿಸಬಹುದು.

ಆರಂಭಿಕವಾಗಿ ಈ ಪ್ರಾಯೋಗಿಕ ಸೇವೆಯು ವಿಮಾನ ನಿಲ್ದಾಣದ ಟರ್ಮಿನಲ್ ಪ್ರವೇಶ ಮತ್ತು ಭದ್ರತಾ ತಪಾಸಣೆ (ಸೆಕ್ಯುರಿಟಿ ಚೆಕ್) ಹಂತಗಳಲ್ಲಿ ಮಾತ್ರ ಲಭ್ಯವಿರಲಿದೆ. ಇಂಡಿಗೋ ಮತ್ತು ಏರ್ ಇಂಡಿಯಾದ ಆಯ್ದ ಅಂತಾರಾಷ್ಟ್ರೀಯ ವಿಮಾನಗಳಿಗೆ ಈ ಸೌಲಭ್ಯವಿದ್ದು, ಮುಂದಿನ ದಿನಗಳಲ್ಲಿ ಬೋರ್ಡಿಂಗ್ ಹಂತದವರೆಗೂ ಇದನ್ನು ವಿಸ್ತರಿಸುವ ಉದ್ದೇಶವಿದೆ. 

ಮೂಲ ದಾಖಲೆ ಕಡ್ಡಾಯ

ಡಿಜಿ ಯಾತ್ರಾ ಸೌಲಭ್ಯವಿದ್ದರೂ, ಇಮಿಗ್ರೇಷನ್‌ ಮತ್ತು ಎಮಿಗ್ರೇಷನ್‌ ಪ್ರಕ್ರಿಯೆಗಳು ಎಂದಿನಂತೆ ನಡೆಯಲಿದ್ದು, ಅಂತಾರಾಷ್ಟ್ರೀಯ ಪ್ರಯಾಣಿಕರು ತಮ್ಮ ಪಾಸ್‌ಪೋರ್ಟ್, ವೀಸಾ ಸೇರಿದಂತೆ ಅಗತ್ಯ ಪ್ರಯಾಣ ದಾಖಲೆಗಳನ್ನು ಭೌತಿಕವಾಗಿ ತಮ್ಮೊಂದಿಗೇ ಕೊಂಡೊಯ್ಯುವುದು ಕಡ್ಡಾಯವಾಗಿದೆ. 

ವಿಮಾನಯಾನ ಸಂಸ್ಥೆಗಳ ಕೌಂಟರ್‌ಗಳಲ್ಲಿ ನಡೆಯುವ ಕಡ್ಡಾಯ ದಾಖಲಾತಿ ಪರಿಶೀಲನೆಯನ್ನು ಡಿಜಿ ಯಾತ್ರಾ ಬದಲಿಸುವುದಿಲ್ಲ. ಇದನ್ನು ಪ್ರಯಾಣಿಕರು ಗಮನಿಸಬೇಕು.

ತಂತ್ರಜ್ಞಾನದ ಬಳಕೆಗೆ ಒತ್ತು

ಈ ಹೊಸ ಹೆಜ್ಜೆಯ ಕುರಿತು ಮಾತನಾಡಿದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್‌)ನ ಮುಖ್ಯ ತಾಂತ್ರಿಕ ಅಧಿಕಾರಿ ಜಾರ್ಜ್ ಫ್ಯಾಂಥೋಮ್, “ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪಯಣವನ್ನು ಸರಳಗೊಳಿಸುವಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತಿದೆ. ಇದೀಗ ಡಿಜಿ ಯಾತ್ರಾವನ್ನು ಅಂತಾರಾಷ್ಟ್ರೀಯ ನಿರ್ಗಮನಕ್ಕೂ ವಿಸ್ತರಿಸುತ್ತಿರುವುದು ಪ್ರಯಾಣದ ಅನುಭವವನ್ನು ಇನ್ನಷ್ಟು ಸುಗಮಗೊಳಿಸಲಿದೆ,” ಎಂದರು.

“ಸುರಕ್ಷಿತ ಡಿಜಿಟಲ್ ಗುರುತು ಮತ್ತು ಫೇಸ್‌ ರೆಕಗ್ನಿಷನ್‌ ತಂತ್ರಜ್ಞಾನವನ್ನು ಬಳಸುವ ಮೂಲಕ, ವಿಮಾನ ನಿಲ್ದಾಣದಲ್ಲಿ ಪದೇ ಪದೇ ದಾಖಲೆಗಳನ್ನು ಪರಿಶೀಲಿಸುವ ಕಿರಿಕಿರಿಯನ್ನು ಕಡಿಮೆ ಮಾಡುತ್ತಿದ್ದೇವೆ. ಭವಿಷ್ಯದ ಅಂತಾರಾಷ್ಟ್ರೀಯ ಪ್ರಯಾಣದ ಅಗತ್ಯಗಳಿಗೆ ತಕ್ಕಂತೆ ಈ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ಸರ್ಕಾರಿ ಪ್ರಾಧಿಕಾರಗಳು ಹಾಗೂ ನಮ್ಮ ಪಾಲುದಾರರಾದ ಇಂಡಿಗೋ, ಏರ್ ಇಂಡಿಯಾ, ಸೀಟಾ ಮತ್ತು ಡಿಜಿ ಯಾತ್ರಾ ಸಂಸ್ಥೆಗಳ ಸಹಯೋಗದಿಂದ ಈ ಸೇವೆ ಸಾಧ್ಯವಾಗಿದೆ,” ಎಂದು ಅವರು ವಿವರಿಸಿದರು.

ಈ ವರ್ಷದ ಆರಂಭದಲ್ಲಿ ಐಎಟಿಎ, ಇಂಡಿಗೋ, ಸೀಟಾ ಮತ್ತು ಡಿಜಿ ಯಾತ್ರಾ ಸಹಯೋಗದೊಂದಿಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಡೆಸಲಾದ ತಾಂತ್ರಿಕ ಪರೀಕ್ಷೆಗಳ ಆಧಾರದ ಮೇಲೆ ಈ ಅಂತಾರಾಷ್ಟ್ರೀಯ ಪ್ರಾಯೋಗಿಕ ಸೇವೆಯನ್ನು ಅಭಿವೃದ್ಧಿಪಡಿಸಲಾಗಿದೆ. 

ಇದರೊಂದಿಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಪ್ರಯಾಣಿಕರಿಗೆ ವಿಶ್ವದರ್ಜೆಯ ಅನುಭವ ನೀಡುವ ಹಾಗೂ ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಏರ್‌ಪೋರ್ಟ್ ಅನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ ಹೆಜ್ಜೆ ಇಟ್ಟಿದೆ.