ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಅವರು ಕೊನೆಗೂ ಸಿಐಡಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಹಗರಣ ಬಹಿರಂಗವಾದ ಬೆನ್ನಲ್ಲೇ ತಲೆಮರೆಸಿಕೊಂಡಿದ್ದ ಅವರಿಗೆ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.
ಜೊತೆಗೆ, ಆರೋಪಿಯ ಪತ್ತೆಗಾಗಿ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲೂ ತೀವ್ರ ಶೋಧ ನಡೆಸಲಾಗಿತ್ತು. ಆದರೆ, ನ್ಯಾಯಾಲಯದಲ್ಲಿ ತಮ್ಮ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಅವರು ಇದೀಗ ತನಿಖಾಧಿಕಾರಿಗಳ ಮುಂದೆ ಪ್ರತ್ಯಕ್ಷರಾಗಿದ್ದಾರೆ.
ಶಾಂತಾ ಹೊಸಮನಿ ಅವರ ಮೇಲೆ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮವೆಸಗಿರುವ ಗಂಭೀರ ಆರೋಪಗಳಿವೆ. ಸಂದರ್ಶನಕ್ಕೂ ಮುನ್ನವೇ ನೇಮಕಾತಿ ಆಕಾಂಕ್ಷಿ ಮಮಿತಾ ಎಂಬ ಅಭ್ಯರ್ಥಿಯ ಜೊತೆ 3 ಬಾರಿ ಫೋನ್ ಮೂಲಕ ಮಾತುಕತೆ ನಡೆಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಕೇವಲ ಪಶುವೈದ್ಯಾಧಿಕಾರಿ ಹಗರಣ ಮಾತ್ರವಲ್ಲದೆ, ಆರ್‌ಡಬ್ಲ್ಯೂಡಿ (RWD) ಇಲಾಖೆ ಹಾಗೂ ಎಇಇ (AEE) ನೇಮಕಾತಿ ಅಕ್ರಮದಲ್ಲೂ ಇವರ ಹೆಸರು ತಳುಕುಹಾಕಿಕೊಂಡಿದೆ. 2023 ರಲ್ಲಿ ಎಇಇ ಅಕ್ರಮ ತನಿಖೆಗೆ ಉಪ ಸಮಿತಿ ನೇಮಿಸಲಾಗಿತ್ತು.
ಆದರೆ, ಸಮಿತಿಯ ಇತರ ಸದಸ್ಯರ ಗಮನಕ್ಕೆ ತಾರದೆ ಆಗಿನ ಕಾರ್ಯದರ್ಶಿಗಳ ಮೂಲಕ ಆಯ್ಕೆ ಪಟ್ಟಿ ಪ್ರಕಟಿಸಲು ಶಾಂತಾ ಮುಂದಾಗಿದ್ದರು. ಇತರ ಸದಸ್ಯರ ತೀವ್ರ ಆಕ್ಷೇಪದಿಂದಾಗಿ ಪಟ್ಟಿ ಪ್ರಕಟವಾಗುವುದು ತಪ್ಪಿತ್ತು. ಆ ಬಳಿಕ ಉಪ ಸಮಿತಿಯಿಂದಲೇ ಅವರನ್ನು ಹೊರಗಿಡಲಾಗಿತ್ತು ಎಂಬುದು ತನಿಖೆ ವೇಳೆ ಬಯಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಆಗಸ್ಟ್ 18 ರಂದು ಶಾಂತಾ ಹೊಸಮನಿ ಹಾಗೂ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸೇರಿದಂತೆ ಪ್ರಮುಖರ ನಿವಾಸಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದರು. ತದನಂತರ ಸೆಪ್ಟೆಂಬರ್ ತಿಂಗಳಲ್ಲಿ ಸಿಐಡಿ ಅಧಿಕಾರಿಗಳು ಸಹ ಇವರ ನಿವಾಸದ ಮೇಲೆ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.
ಇಷ್ಟೆಲ್ಲಾ ಬೆಳವಣಿಗೆಗಳು ನಡೆದರೂ ಇ.ಡಿ ಹಾಗೂ ಸಿಐಡಿ ಅಧಿಕಾರಿಗಳ ಕೈಗೆ ಸಿಗದೆ ಶಾಂತಾ ಹೊಸಮನಿ ಸತಾಯಿಸುತ್ತಿದ್ದರು. ಇದೀಗ ಜಾಮೀನು ನಿರಾಕರಣೆಯಾದ ಬಳಿಕ ಸಿಐಡಿ ಎದುರು ಶರಣಾಗಿದ್ದು, ತನಿಖೆಯ ಬಳಿಕ ಇನ್ನಷ್ಟು ಸ್ಫೋಟಕ ಮಾಹಿತಿಗಳು ಹೊರಬೀಳುವ ಸಾಧ್ಯತೆಯಿದೆ.
