S Shorts

ಪ್ರಯಾಣಿಕರೇ ಗಮನಿಸಿ: KSR ಬೆಂಗಳೂರು ನಿಲ್ದಾಣದಲ್ಲಿ 2 ತಿಂಗಳು 58 ರೈಲುಗಳು ಸಂಪೂರ್ಣ ರದ್ದು!

ಪ್ರಯಾಣಿಕರೇ ಗಮನಿಸಿ: KSR ಬೆಂಗಳೂರು ನಿಲ್ದಾಣದಲ್ಲಿ 2 ತಿಂಗಳು 58 ರೈಲುಗಳು ಸಂಪೂರ್ಣ ರದ್ದು!
Author: Sagaradventure
Posted By: Sagaradventure
Updated: Jun 16, 2026 | 10:27 AM

ಬೆಂಗಳೂರು: ರೈಲ್ವೆ ಪ್ರಯಾಣಿಕರೇ ಗಮನಿಸಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ಬೆಂಗಳೂರು ಕೇಂದ್ರ ರೈಲು ನಿಲ್ದಾಣದಲ್ಲಿ ಯಾರ್ಡ್ ಮರು ವಿನ್ಯಾಸ (Yard Remodelling) ಹಾಗೂ ಸುರಕ್ಷತಾ ಸುಧಾರಣಾ ಕಾಮಗಾರಿಗಳು ಇಂದಿನಿಂದ (ಜೂನ್ 16) ಆರಂಭವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮುಂದಿನ ಸುಮಾರು ಎರಡು ತಿಂಗಳ ಕಾಲ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಕಾಮಗಾರಿಯ ಅವಧಿಯಲ್ಲಿ 58 ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದ್ದು, 116 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಇನ್ನು 26 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು, ಹಲವು ರೈಲುಗಳ ವೇಳಾಪಟ್ಟಿಯನ್ನು ಮರುನಿಗದಿಪಡಿಸಲಾಗಿದೆ.

ವಂದೇ ಭಾರತ್ ರೈಲುಗಳ ಸಂಚಾರದಲ್ಲೂ ಬದಲಾವಣೆ

ಯಾರ್ಡ್ ಕಾಮಗಾರಿಯಿಂದಾಗಿ ಒಟ್ಟು 10 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿ ಮತ್ತು ಆರಂಭ/ಅಂತ್ಯದ ನಿಲ್ದಾಣಗಳಲ್ಲಿ ಬದಲಾವಣೆ ಮಾಡಲಾಗಿದೆ. ಆದರೆ, ಯಾವುದೇ ವಂದೇ ಭಾರತ್ ರೈಲನ್ನು ಸಂಪೂರ್ಣವಾಗಿ ರದ್ದುಗೊಳಿಸಿಲ್ಲ.

ಪ್ರಮುಖ ವಂದೇ ಭಾರತ್ ರೈಲುಗಳ ವಿವರ ಹೀಗಿದೆ:

ರೈಲು ಸಂಖ್ಯೆ ಮತ್ತು ಹೆಸರು ಅವಧಿ ಬದಲಾವಣೆ ವಿವರ
ಬೆಳಗಾವಿ–ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ (26751) ಆಗಸ್ಟ್ 1ರಿಂದ 3ರವರೆಗೆ ಯಶವಂತಪುರದಲ್ಲಿ ಜರ್ನಿ ಅಂತ್ಯಗೊಳ್ಳಲಿದೆ.
ಕೆಎಸ್‌ಆರ್ ಬೆಂಗಳೂರು–ಬೆಳಗಾವಿ ವಂದೇ ಭಾರತ್ (26752) ಆಗಸ್ಟ್ 1ರಿಂದ 3ರವರೆಗೆ ಕೆಎಸ್‌ಆರ್ ಬೆಂಗಳೂರು ಬದಲಿಗೆ ಯಶವಂತಪುರದಿಂದಲೇ ಆರಂಭ.
ಕಲಬುರಗಿ–ಎಸ್‌ಎಂವಿಟಿ ಬೆಂಗಳೂರು ವಂದೇ ಭಾರತ್ (22232) ಆಗಸ್ಟ್ 1ರಿಂದ 3ರವರೆಗೆ ಯಲಹಂಕ ನಿಲ್ದಾಣದಲ್ಲಿ ಅಂತ್ಯಗೊಳ್ಳಲಿದೆ.
ಎಸ್‌ಎಂವಿಟಿ ಬೆಂಗಳೂರು–ಕಲಬುರಗಿ ವಂದೇ ಭಾರತ್ (22231) ಆಗಸ್ಟ್ 1ರಿಂದ 3ರವರೆಗೆ ಯಲಹಂಕದಿಂದಲೇ ತನ್ನ ಸಂಚಾರ ಆರಂಭಿಸಲಿದೆ.
ಕೆಎಸ್‌ಆರ್ ಬೆಂಗಳೂರು–ಧಾರವಾಡ ವಂದೇ ಭಾರತ್ (20661) ಆಗಸ್ಟ್ 1ರಿಂದ 3ರವರೆಗೆ ಯಶವಂತಪುರದಿಂದ ಸಂಚರಿಸಲಿದೆ.
ಧಾರವಾಡ–ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ (20662) ಜುಲೈ 31ರಿಂದ ಆಗಸ್ಟ್ 3ರವರೆಗೆ ಯಶವಂತಪುರದಲ್ಲಿ ಅಂತ್ಯಗೊಳ್ಳಲಿದೆ.
ಎರ್ನಾಕುಲಂ–ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ (26652) ಜುಲೈ 31ರಿಂದ ಆಗಸ್ಟ್ 3ರವರೆಗೆ ಕೆ.ಆರ್.ಪುರಂ ನಿಲ್ದಾಣದಲ್ಲಿ ಜರ್ನಿ ಮುಕ್ತಾಯಗೊಳಿಸಲಿದೆ.
ಕೆಎಸ್‌ಆರ್ ಬೆಂಗಳೂರು–ಎರ್ನಾಕುಲಂ ವಂದೇ ಭಾರತ್ (26651) ಆಗಸ್ಟ್ 1ರಿಂದ 4ರವರೆಗೆ ಬೆಂಗಳೂರು ಕ್ಯಾಂಟೋನ್ಮೆಂಟ್‌ನಿಂದ ಸಂಚಾರ ಆರಂಭಿಸಲಿದೆ.

ರಾಜಧಾನಿ ಮತ್ತು ಕರ್ನಾಟಕ ಎಕ್ಸ್‌ಪ್ರೆಸ್ ಮಾಹಿತಿ

  • ರಾಜಧಾನಿ ಎಕ್ಸ್‌ಪ್ರೆಸ್ (22691): ಆಗಸ್ಟ್ 1ರಿಂದ 3ರವರೆಗೆ ಕೆಎಸ್‌ಆರ್ ಬೆಂಗಳೂರು ಬದಲಿಗೆ ಯಶವಂತಪುರದಿಂದ ಹಜರತ್ ನಿಜಾಮುದ್ದೀನ್‌ಗೆ ಸಂಚಾರ ಆರಂಭಿಸಲಿದೆ. ಇದರ ಜೋಡಿ ರೈಲು (22692) ಆಗಸ್ಟ್ 2ರಂದು ಮಾರ್ಗ ಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಣಕ್ಕೆ ಒಳಪಡಲಿದೆ.
  • ಕರ್ನಾಟಕ ಎಕ್ಸ್‌ಪ್ರೆಸ್ (12628): ಜುಲೈ 29ರಿಂದ ಆಗಸ್ಟ್ 1ರವರೆಗೆ ನವದೆಹಲಿಯಿಂದ ಬರುವ ಈ ರೈಲು ಬೈಯಪ್ಪನಹಳ್ಳಿಯಲ್ಲಿ ಅಂತ್ಯಗೊಳ್ಳಲಿದೆ.
  • ಕರ್ನಾಟಕ ಎಕ್ಸ್‌ಪ್ರೆಸ್ (12627): ಆಗಸ್ಟ್ 1ರಿಂದ 3ರವರೆಗೆ ನವದೆಹಲಿಗೆ ತೆರಳುವ ಈ ರೈಲು ಕೆಎಸ್‌ಆರ್ ಬೆಂಗಳೂರು ಬದಲಿಗೆ ಬೈಯಪ್ಪನಹಳ್ಳಿಯಿಂದಲೇ ಪ್ರಯಾಣ ಆರಂಭಿಸಲಿದೆ.

ಮೈಸೂರು ಮತ್ತು ತುಮಕೂರು ಪ್ರಯಾಣಿಕರಿಗೆ ಭಾರಿ ಹೊಡೆತ

ಈ ಕಾಮಗಾರಿಗಳಿಂದಾಗಿ ಮೈಸೂರು ಮತ್ತು ತುಮಕೂರು ಭಾಗದ ನಿತ್ಯ ಪ್ರಯಾಣಿಕರಿಗೆ ಹೆಚ್ಚು ಅನಾನುಕೂಲವಾಗಲಿದೆ. ಮೈಸೂರು ಅಥವಾ ಅಶೋಕಪುರಂನಿಂದ ಆರಂಭವಾಗುವ ಇಲ್ಲವೇ ಅಂತ್ಯಗೊಳ್ಳುವ ಒಟ್ಟು 16 ರೈಲುಗಳನ್ನು ರದ್ದುಗೊಳಿಸಲಾಗಿದೆ. ಇದಲ್ಲದೆ, ತುಮಕೂರು ಸೇರಿದಂತೆ ನಗರದ ವಿವಿಧ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ 9 ಮೆಮು (MEMU) ರೈಲುಗಳ ಸಂಚಾರವನ್ನೂ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಭಾಗಶಃ ರದ್ದುಗೊಂಡ ರೈಲುಗಳು ಬೆಂಗಳೂರಿನ ಇತರ ಉಪನಗರ ನಿಲ್ದಾಣಗಳಿಂದ ಕಾರ್ಯಾಚರಣೆ ನಡೆಸಲಿವೆ.

ಯಾರ್ಡ್ ಮರು ವಿನ್ಯಾಸದಿಂದ ಆಗುವ ಪ್ರಯೋಜನಗಳೇನು?

ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಾಡಿ ಅವರ ಪ್ರಕಾರ, ಈ ಬೃಹತ್ ಕಾಮಗಾರಿಯು ಎರಡು ಹಂತಗಳಲ್ಲಿ ನಡೆಯಲಿದ್ದು, ಭವಿಷ್ಯದಲ್ಲಿ ರೈಲು ಕಾರ್ಯಾಚರಣೆಗೆ ಭಾರಿ ಅನುಕೂಲ ಮಾಡಿಕೊಡಲಿದೆ.

ಬೆಂಗಳೂರು ಕ್ಯಾಂಟೋನ್ಮೆಂಟ್ ದಿಕ್ಕಿನಲ್ಲಿ ಒಂದೇ ಸಮಯದಲ್ಲಿ ರೈಲುಗಳ ಆಗಮನ ಹಾಗೂ ನಿರ್ಗಮನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. 7ನೇ ಪ್ಲಾಟ್‌ಫಾರ್ಮ್ ಅನ್ನು 460 ಮೀಟರ್‌ನಿಂದ 600 ಮೀಟರ್‌ಗೆ ವಿಸ್ತರಿಸಲಾಗುತ್ತಿದ್ದು, ಇದರಿಂದ 24 ಬೋಗಿಗಳ ಪೂರ್ಣ ಉದ್ದದ ರೈಲುಗಳನ್ನು ಸುಲಭವಾಗಿ ನಿರ್ವಹಿಸಬಹುದು. ಸರಕು ರೈಲುಗಳ ಸಂಚಾರಕ್ಕಾಗಿ ಪ್ರತ್ಯೇಕ ‘ನಾನ್-ಪ್ಲಾಟ್‌ಫಾರ್ಮ್’ ಮಾರ್ಗದ ಸೌಲಭ್ಯ ಸಿಗಲಿದೆ.

ಮೈಸೂರು ಹಾಗೂ ಕ್ಯಾಂಟೋನ್ಮೆಂಟ್ ಮಾರ್ಗಗಳಲ್ಲಿ ಸಿಗ್ನಲಿಂಗ್ ವ್ಯವಸ್ಥೆ ಸುಧಾರಿಸಲಿದ್ದು, ಹಳೆಯ ಸಾಲಿಡ್ ಸ್ಟೇಟ್ ಇಂಟರ್‌ಲಾಕಿಂಗ್ (SSI) ವ್ಯವಸ್ಥೆಯ ಬದಲಿಗೆ ಅತ್ಯಾಧುನಿಕ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ (EI) ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಎರಡನೇ ಹಂತದ ಕಾಮಗಾರಿಯಲ್ಲಿ ಯಶವಂತಪುರ ಗ್ರಿಡ್ ಭಾಗದಲ್ಲಿ ಇನ್ನೆರಡು ಹೊಸ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲಾಗುತ್ತದೆ.