ಬೆಂಗಳೂರು: ನಗರದ ಅಂಜನಾಪುರ ಲೇಔಟ್‌ನಲ್ಲಿ ಚಿರತೆ (Leopard) ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸ್ಥಳೀಯರ ಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ ನಾಲ್ಕು ವರ್ಷಗಳಿಂದ ಇಲ್ಲಿ ಚಿರತೆ ಬೀಡು ಬಿಟ್ಟಿದ್ದು, ಅನೇಕ ನಿವಾಸಿಗಳು ಇದನ್ನು ಕಣ್ಣಾರೆ ಕಂಡಿದ್ದಾರೆ. ಇದರ ಪರಿಣಾಮವಾಗಿ ಈಗ ಈ ಏರಿಯಾಗೆ ಅಗತ್ಯ ಸೇವೆಗಳು ಸಿಗದಂತಾಗಿದೆ.
ಸ್ತಬ್ಧಗೊಂಡ ಆನ್ಲೈನ್ ಡೆಲಿವರಿ ಹಾಗೂ ಆಟೋ ಸೇವೆ:
ಕಳೆದ ವರ್ಷ ಸ್ವಿಗಿ (Swiggy) ಡೆಲಿವರಿ ಬಾಯ್ ಒಬ್ಬರಿಗೆ ಚಿರತೆ ಎದುರಾಗಿದ್ದ ಘಟನೆಯ ನಂತರ, ಡೆಲಿವರಿ ಬಾಯ್ಸ್ ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಸಂಜೆ 4 ಗಂಟೆ ದಾಟಿದರೆ ಅಂಜನಾಪುರಕ್ಕೆ ಫುಡ್ ಡೆಲಿವರಿ ಸಿಗುತ್ತಿಲ್ಲ. ಆನ್ಲೈನ್ ಆರ್ಡರ್ ಮಾಡಿದರೂ ಏರಿಯಾ ನೋಡಿ ಡೆಲಿವರಿ ಬಾಯ್ಸ್ ಆರ್ಡರ್ ಕ್ಯಾನ್ಸಲ್ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲದೇ, ಅನೇಕ ಬಾರಿ ಆಟೋ ಚಾಲಕರಿಗೆ ಚಿರತೆ ಅಡ್ಡ ಬಂದಿರುವ ಹಿನ್ನೆಲೆಯಲ್ಲಿ, ಆಟೋಗಳು ಅಂಜನಾಪುರದತ್ತ ತಿರುಗಿಯೂ ನೋಡುತ್ತಿಲ್ಲ. ಸಂಜೆ 6 ಗಂಟೆ ಆಗುತ್ತಿದ್ದಂತೆ ಅಂಜನಾಪುರದಲ್ಲಿ ಅಂಗಡಿಗಳು ಬಂದ್ ಆಗುತ್ತಿದ್ದು, ರಸ್ತೆಗಳು ಖಾಲಿ ಖಾಲಿಯಾಗುತ್ತಿವೆ.
ಚಿರತೆ ಭಯದಿಂದಾಗಿ ಜನರು ಸಂಜೆ 6 ಗಂಟೆಗೇ ಮನೆಯ ಬಾಗಿಲು ಹಾಕಿಕೊಳ್ಳುತ್ತಿದ್ದಾರೆ. ಒಬ್ಬೊಬ್ಬರಾಗಿ ಹೊರಗೆ ಬರಲು ನಿವಾಸಿಗಳು ಹೆದರುತ್ತಿದ್ದು, ಏನಾದರೂ ತುರ್ತು ಕೆಲಸವಿದ್ದರೆ ಕಾರಿನಲ್ಲೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
