S Shorts

Love Seasons | ಹಾಡುಗಳ ಬಳಿಕ ಟ್ರೈಲರ್ ಹವಾ: ನಿರೀಕ್ಷೆ ಹೆಚ್ಚಿಸಿದ ‘ಲವ್ ಸೀಸನ್ಸ್’

Love Seasons | ಹಾಡುಗಳ ಬಳಿಕ ಟ್ರೈಲರ್ ಹವಾ: ನಿರೀಕ್ಷೆ ಹೆಚ್ಚಿಸಿದ ‘ಲವ್ ಸೀಸನ್ಸ್’
Author: Meghana Gowda
Posted By: Meghana Gowda
Updated: Jun 25, 2026 | 11:54 AM

ಬೆಂಗಳೂರು: ಎನ್.ಆರ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ, ಕೃತ್ವಿಕ್ ನಿರ್ದೇಶನದ ಬಹುನಿರೀಕ್ಷಿತ ‘ಲವ್ ಸೀಸನ್ಸ್’ (Love Seasons) ಚಿತ್ರದ ಅಧಿಕೃತ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ನಟ ಮುಕುಂದ ರಾಮಸ್ವಾಮಿ ಅವರ ಹುಟ್ಟುಹಬ್ಬದ ಸವಿನೆನಪಿಗಾಗಿ ಚಿತ್ರತಂಡ ಈ ಟ್ರೈಲರ್ ಅನ್ನು ಪ್ರೇಕ್ಷಕರಿಗೆ ಉಡುಗೊರೆಯಾಗಿ ನೀಡಿದೆ.

ಟ್ರೈಲರ್ ಬಿಡುಗಡೆ ಅಂಗವಾಗಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ರಂಗಕರ್ಮಿ ಮಂಡ್ಯ ರಮೇಶ್ ಹಾಗೂ ಖ್ಯಾತ ನಿರ್ದೇಶಕ ಜಯತೀರ್ಥ ಪಾಲ್ಗೊಂಡು ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ವೇಳೆ ಮಾತನಾಡಿದ ಅವರು, “ಈ ಸಿನಿಮಾದಲ್ಲಿ ರಂಗಭೂಮಿ ಹಿನ್ನೆಲೆಯ ಕಲಾವಿದರೇ ಹೆಚ್ಚಾಗಿದ್ದಾರೆ. ರಂಗಭೂಮಿಯಿಂದ ಬಂದವರಲ್ಲಿ ಪ್ರತಿಭೆಯ ಜೊತೆಗೆ ಶಿಸ್ತು ಮತ್ತು ಬದ್ಧತೆಯೂ ಇರುತ್ತದೆ. ನಿರ್ದೇಶಕ ಕೃತ್ವಿಕ್ ತಮ್ಮ ಮೊದಲ ಪ್ರಯತ್ನದಲ್ಲೇ ಅತ್ಯಂತ ಸುಂದರವಾದ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಹೊಸಬರ ಈ ವಿಭಿನ್ನ ಪ್ರಯತ್ನವನ್ನು ಪ್ರೇಕ್ಷಕರು ಪ್ರೋತ್ಸಾಹಿಸಬೇಕು” ಎಂದು ಮನವಿ ಮಾಡಿದರು.

‘ಲವ್ ಸೀಸನ್ಸ್’ ಚಿತ್ರದ ಮೂರು ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಕೇಳುಗರ ಮನ ಗೆದ್ದಿದ್ದು, ಸಿನಿಮಾದ ಮೇಲಿನ ಕುತೂಹಲವನ್ನು ದುಪ್ಪಟ್ಟುಗೊಳಿಸಿವೆ. ಸಂಗೀತದ ಯಶಸ್ಸಿನ ಬೆನ್ನಲ್ಲೇ ಈಗ ಬಿಡುಗಡೆಯಾಗಿರುವ ಟ್ರೈಲರ್ ಕೂಡ ಸಿನಿಪ್ರಿಯರ ಗಮನ ಸೆಳೆಯುತ್ತಿದ್ದು, ಚಿತ್ರವು ಇದೇ ಜುಲೈ 3 ರಂದು ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿದೆ.

ಈ ಚಿತ್ರವನ್ನು ಎನ್.ಆರ್ ಮಂಜುನಾಥ (ನೀಲೇರಿ) ನಿರ್ಮಿಸಿದ್ದು, ವೀರ್ ಸಮರ್ಥ್ ಅವರ ಸಂಗೀತ ನಿರ್ದೇಶನವಿದೆ. ಚಿತ್ರಕ್ಕೆ ಕೆ.ಕಲ್ಯಾಣ್ ಮತ್ತು ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಮುಕುಂದ ರಾಮಸ್ವಾಮಿ ಅವರಿಗೆ ದಿಯಾ ಕೀರ್ತಿ, ಚಂದನಾ ಗೌಡ ಮತ್ತು ಶ್ವೇತಾ ಕೊಗ್ಲೂರು ನಾಯಕಿಯರಾಗಿ ಜೊತೆಯಾಗಿದ್ದಾರೆ. ಉಳಿದಂತೆ ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತಾ ಅನಿಲ್, ಜಯತೀರ್ಥ, ಚೇತನ್ ದುರ್ಗ, ಕಾಮಿಡಿ ಕಿಲಾಡಿ ಸದಾನಂದ್, ಹುಲಿ ಕಾರ್ತಿಕ್ ಮುಂತಾದ ಪ್ರಮುಖ ತಾರಾಗಣ ಈ ಚಿತ್ರದಲ್ಲಿದೆ. ಅವಿನಾಶ್ ಶಾಸ್ತ್ರಿ ಅವರ ಛಾಯಾಗ್ರಹಣ ಹಾಗೂ ಮಧು ತುಂಬಾಕೆರೆ ಅವರ ಸಂಕಲನ ಚಿತ್ರಕ್ಕಿದೆ.