ನವದೆಹಲಿ: ದೇಶಾದ್ಯಂತ ಎಲ್‌ಪಿಜಿ ( LPG cylinder) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವುದನ್ನು ಸರಿಪಡಿಸಲು ಕೇಂದ್ರ ಸರ್ಕಾರ ಹೊಸ ಹಾದಿ ಹುಡುಕುತ್ತಿದೆ. ಸದ್ಯ ಬಳಕೆಯಲ್ಲಿರುವ 14.2 ಕೆಜಿ ತೂಕದ ಸಿಲಿಂಡರ್ ಬದಲಿಗೆ, ತೂಕವನ್ನು 10 ಕೆಜಿಗೆ ಇಳಿಸಿ ಹೆಚ್ಚಿನ ಜನರಿಗೆ ಗ್ಯಾಸ್ ತಲುಪಿಸುವ ಯೋಜನೆ ಸಿದ್ಧವಾಗುತ್ತಿದೆ.
ದೇಶದಲ್ಲಿ ದಿನದಿಂದ ದಿನಕ್ಕೆ ಇಂಧನದ ಬೇಡಿಕೆ ಹೆಚ್ಚುತ್ತಿದ್ದು, ಪೂರೈಕೆಯಲ್ಲಿ ಭಾರಿ ವ್ಯತ್ಯಾಸ ಕಂಡುಬರುತ್ತಿದೆ. ದೇಶಕ್ಕೆ ಪ್ರತಿದಿನ ಒಟ್ಟಾರೆ 93,500 ಟನ್ ಎಲ್‌ಪಿಜಿ ಅಗತ್ಯವಿದೆ. ಇದರಲ್ಲಿ ಕೇವಲ ಮನೆಗಳ ಅಡುಗೆ ಉದ್ದೇಶಕ್ಕಾಗಿಯೇ 80,400 ಟನ್ ಗ್ಯಾಸ್ ಬೇಕಾಗುತ್ತದೆ. ಸದ್ಯ ಅಗತ್ಯಕ್ಕೆ ತಕ್ಕಷ್ಟು ಗ್ಯಾಸ್ ಪೂರೈಕೆಯಾಗುತ್ತಿಲ್ಲ. ಈ ಕೊರತೆಯನ್ನು ನೀಗಿಸಲು ಸಿಲಿಂಡರ್‌ನ ತೂಕವನ್ನು ಕಡಿಮೆ ಮಾಡುವುದೇ ಏಕೈಕ ದಾರಿ ಎಂದು ತೈಲ ಕಂಪನಿಗಳು ಭಾವಿಸಿವೆ.
ಸಿಲಿಂಡರ್ ತೂಕವನ್ನು 10 ಕೆಜಿಗೆ ಇಳಿಸುವುದರಿಂದ, ಉಳಿತಾಯವಾಗುವ ಗ್ಯಾಸ್ ಅನ್ನು ಹೆಚ್ಚಿನ ಸಂಖ್ಯೆಯ ಗ್ರಾಹಕರಿಗೆ ಹಂಚಿಕೆ ಮಾಡಬಹುದು. ಗ್ರಾಹಕರಿಂದ 14.2 ಕೆಜಿಯ ಪೂರ್ಣ ಹಣ ಪಡೆಯುವ ಬದಲು, ಕೇವಲ 10 ಕೆಜಿಗೆ ಎಷ್ಟು ಹಣವಾಗುತ್ತದೋ ಅಷ್ಟನ್ನು ಮಾತ್ರ ಪಡೆಯುವ ಬಗ್ಗೆ ಚಿಂತನೆ ನಡೆದಿದೆ.
ಪಂಚ ರಾಜ್ಯಗಳ ಚುನಾವಣೆ ಹತ್ತಿರ ಬರುತ್ತಿರುವುದರಿಂದ, ಈ ನಿರ್ಧಾರ ಜಾರಿಗೆ ತಂದರೆ ಜನರಿಂದ ವಿರೋಧ ವ್ಯಕ್ತವಾಗಬಹುದು ಎಂಬ ಆತಂಕವೂ ಸರ್ಕಾರಕ್ಕಿದೆ. ಹೀಗಾಗಿ ಸಮಯೋಚಿತವಾಗಿ ಇದನ್ನು ಜಾರಿಗೆ ತರುವ ಸಾಧ್ಯತೆಯಿದೆ. ಈ ಯೋಜನೆಯಿಂದ ಗೃಹಿಣಿಯರಿಗೆ ಸಿಲಿಂಡರ್ ಎತ್ತುವ ಹೊರೆ ಕಡಿಮೆಯಾಗಬಹುದಾದರೂ, ಪದೇ ಪದೇ ಸಿಲಿಂಡರ್ ಬುಕ್ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ.
