S Shorts

ತುಕಾರಾಂ ಮುಂಢೆ ಎಫೆಕ್ಟ್: ಮಹಾರಾಷ್ಟ್ರದ ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ‘ಹೆಲ್ತಿ ಫುಡ್’ ಕಡ್ಡಾಯ

ತುಕಾರಾಂ ಮುಂಢೆ ಎಫೆಕ್ಟ್: ಮಹಾರಾಷ್ಟ್ರದ ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ‘ಹೆಲ್ತಿ ಫುಡ್’ ಕಡ್ಡಾಯ
Author: Sagaradventure
Posted By: Sagaradventure
Updated: Sep 13, 2026 | 1:36 PM

ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (FDA) ಆಯುಕ್ತ ತುಕಾರಾಂ ಮುಂಢೆ ಅವರು ಶಾಲಾ ಆವರಣಗಳಲ್ಲಿ ಜಂಕ್ ಫುಡ್ ನಿಷೇಧಿಸಿ ಕೈಗೊಂಡ ದಿಟ್ಟ ಕ್ರಮದ ಬೆನ್ನಲ್ಲೇ, ಇದೀಗ ಮಹಾರಾಷ್ಟ್ರ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಸರ್ಕಾರಿ ಹಾಗೂ ಅರೆ-ಸರ್ಕಾರಿ ಕಚೇರಿಗಳ ಕ್ಯಾಂಟೀನ್‌ಗಳಲ್ಲಿ, ತರಬೇತಿ ಕಾರ್ಯಕ್ರಮಗಳಲ್ಲಿ ಹಾಗೂ ಅಧಿಕೃತ ಸಭೆ-ಸಮಾರಂಭಗಳಲ್ಲಿ ಕಡ್ಡಾಯವಾಗಿ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನೇ (Healthy food) ವಿತರಿಸಬೇಕು ಎಂದು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಮಧುಮೇಹ, ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಗೆ ಪ್ರಮುಖ ಕಾರಣವಾಗುತ್ತಿರುವ ಅತಿಯಾದ ಎಣ್ಣೆಯುಕ್ತ ಮತ್ತು ಅಲ್ಟ್ರಾ-ಪ್ರೊಸೆಸ್ಡ್ (Ultra-processed) ಆಹಾರಗಳನ್ನು ಕಚೇರಿಗಳಿಂದ ಸಂಪೂರ್ಣವಾಗಿ ದೂರವಿಡಲು ಸರ್ಕಾರ ಈ ಆದೇಶ ಹೊರಡಿಸಿದೆ.

ಹೊಸ ಮೆನುವಿನಲ್ಲಿ ಏನೇನಿರಲಿದೆ?

​ಸರ್ಕಾರಿ ಕ್ಯಾಂಟೀನ್‌ಗಳ ಹೊಸ ಮೆನುವಿನಲ್ಲಿ ಬಾಳೆಹಣ್ಣು, ಸೀಬೆ, ಪಪ್ಪಾಯಿ ಮತ್ತು ಸೇಬಿನಂತಹ ತಾಜಾ ಹಣ್ಣುಗಳು, ಬೇಯಿಸಿದ ಮೊಟ್ಟೆ, ಮೊಳಕೆ ಕಾಳುಗಳು, ಪೋಹಾ, ಇಡ್ಲಿ-ಸಾಂಬಾರ್, ಬಿಸಿ ಹಾಲು ಹಾಗೂ ಗ್ರೀನ್ ಟೀ ಸೇರ್ಪಡೆಯಾಗಲಿವೆ. ಮಧ್ಯಾಹ್ನದ ಊಟದಲ್ಲಿ ಸ್ಥಳೀಯ ಹಾಗೂ ಸಾಂಪ್ರದಾಯಿಕ ಆಹಾರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಜೋಳ, ಸಜ್ಜೆ ಮತ್ತು ರಾಗಿಯಿಂದ ತಯಾರಿಸಿದ ರೊಟ್ಟಿ, ಮೊಳಕೆಕಾಳಿನ ಪಲ್ಯ, ಹಸಿರು ತರಕಾರಿಗಳು, ಮಜ್ಜಿಗೆ, ಬೇಳೆಕಾಳುಗಳು ಹಾಗೂ ಸಲಾಡ್‌ಗಳನ್ನು ಒದಗಿಸಲಾಗುವುದು. ಮುಂಬೈನಲ್ಲಿರುವ ರಾಜ್ಯದ ಆಡಳಿತ ಕೇಂದ್ರವಾದ ‘ಮಂತ್ರಾಲಯ’ದ ಕ್ಯಾಂಟೀನ್‌ಗಳಲ್ಲಿ ಈಗಾಗಲೇ ಈ ಆರೋಗ್ಯಕರ ಮೆನುವನ್ನು ಜಾರಿಗೆ ತರಲಾಗಿದೆ.

ಕಳವಳಕಾರಿಯಾಗಿರುವ ಜೀವನಶೈಲಿ ಕಾಯಿಲೆಗಳು

​ಭಾರತದಲ್ಲಿ ಸಂಭವಿಸುತ್ತಿರುವ ಒಟ್ಟು ಸಾವುಗಳ ಪೈಕಿ ಶೇಕಡಾ 66ರಷ್ಟು ಸಾವುಗಳಿಗೆ ಸಾಂಕ್ರಾಮಿಕವಲ್ಲದ ಕಾಯಿಲೆಗಳೇ (Non-communicable diseases) ಕಾರಣವಾಗಿವೆ. ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಶೇಕಡಾ 24ರಷ್ಟು ಜನರು ರಕ್ತದೊತ್ತಡ, ಶೇಕಡಾ 15ರಷ್ಟು ಜನರು ಮಧುಮೇಹ, ಶೇಕಡಾ 25ರಷ್ಟು ಬೊಜ್ಜು ಹಾಗೂ ಶೇಕಡಾ 30ರಷ್ಟು ಜನರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಯುವಜನತೆಯಲ್ಲೂ ಈ ಕಾಯಿಲೆಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸಾರ್ವಜನಿಕ ಆರೋಗ್ಯ ಇಲಾಖೆ, ಅಧಿಕಾರಿಗಳು ಹಾಗೂ ಸಾರ್ವಜನಿಕರಲ್ಲಿ ಉತ್ತಮ ಆಹಾರ ಪದ್ಧತಿಯನ್ನು ಬೆಳೆಸುವ ನಿಟ್ಟಿನಲ್ಲಿ ಈ ಪ್ರಸ್ತಾವನೆಯನ್ನು ಮುಂದಿಟ್ಟಿತ್ತು.

ಶಾಲೆಗಳು ಮತ್ತು ಪ್ರತಿಷ್ಠಿತ ಕ್ಲಬ್‌ಗಳ ಮೇಲೆ ಮುಂಢೆ ಚಾಟಿ

​2005ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಎಫ್‌ಡಿಎ ಆಯುಕ್ತ ತುಕಾರಾಂ ಮುಂಢೆ ಅವರು ಇತ್ತೀಚೆಗಷ್ಟೇ ಮಹಾರಾಷ್ಟ್ರದಾದ್ಯಂತ ಶಾಲೆಗಳ 50 ಮೀಟರ್ ವ್ಯಾಪ್ತಿಯಲ್ಲಿ ಅಧಿಕ ಕೊಬ್ಬು, ಸಕ್ಕರೆ ಮತ್ತು ಉಪ್ಪಿನಂಶವಿರುವ (HFSS) ಜಂಕ್ ಫುಡ್, ಎನರ್ಜಿ ಡ್ರಿಂಕ್ಸ್, ಸಮೋಸ ಹಾಗೂ ವಡಾಪಾವ್‌ ಮಾರಾಟವನ್ನು ನಿಷೇಧಿಸಿದ್ದರು. ಇದಲ್ಲದೆ, ಮುಂಬೈನ ಪ್ರತಿಷ್ಠಿತ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ, ಎಂಐಜಿ ಕ್ರಿಕೆಟ್ ಕ್ಲಬ್, ವಿಲ್ಲಿಂಗ್‌ಡನ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಪಾರ್ಸಿ ಡೈರಿ ಫಾರ್ಮ್‌ನಂತಹ ಐತಿಹಾಸಿಕ ಉಪಹಾರ ಗೃಹಗಳ ಮೇಲೂ ದಾಳಿ ನಡೆಸಿದ್ದರು.

ಅಡುಗೆಮನೆಗಳಲ್ಲಿ ಜಿರಳೆ, ಫಂಗಸ್ ಹಾಗೂ ಕೊಳಕು ವಾತಾವರಣ ಪತ್ತೆಯಾದ ಹಿನ್ನೆಲೆಯಲ್ಲಿ ಹಲವು ಕ್ಲಬ್‌ಗಳ ಆಹಾರ ಪರವಾನಗಿಯನ್ನು ಅಮಾನತುಗೊಳಿಸಿ ಮುಂಢೆ ಅವರು ಭಾರಿ ಸಂಚಲನ ಸೃಷ್ಟಿಸಿದ್ದರು.