ಮಂಡ್ಯ: ತೊಟ್ಟಿಲಿನಲ್ಲಿ ಆಟವಾಡುತ್ತಿದ್ದ ಬಾಲಕನೊಬ್ಬ ಆಕಸ್ಮಿಕವಾಗಿ ಅದೇ ಸೀರೆಯ ಉರುಳಿಗೆ ಸಿಲುಕಿ ಪ್ರಾಣ ಕಳೆದುಕೊಂಡಿರುವ ಕರುಣಾಜನಕ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಾರೇಕುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ವಿಜಯ್ ಕುಮಾರ್ ಎಂಬುವರ ಪುತ್ರ ಭೂಮಿತ್ (8) ಮೃತಪಟ್ಟ ದುರ್ದೈವಿ ಬಾಲಕ. ಮನೆಯ ಹಿರಿಯರು ಮನೆಯೊಳಗಿನ ಕೆಲಸದಲ್ಲಿ ಮಗ್ನರಾಗಿದ್ದಾಗ, ಭೂಮಿತ್ ಮನೆಯ ತೊಲೆಗೆ ಕಟ್ಟಿದ್ದ ಸೀರೆಯ ತೊಟ್ಟಿಲಿನಲ್ಲಿ ಆಟವಾಡುತ್ತಿದ್ದ ಎನ್ನಲಾಗಿದೆ. ಆಟವಾಡುವ ಭರದಲ್ಲಿ ತೊಟ್ಟಿಲಿಗೆ ಕಟ್ಟಿದ್ದ ಸೀರೆಯು ಬಾಲಕನ ಕುತ್ತಿಗೆಗೆ ಅಕಸ್ಮಿಕವಾಗಿ ಬಿಗಿದುಕೊಂಡಿದೆ. ಗಾಬರಿಗೊಂಡ ಬಾಲಕ ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ, ಸೀರೆ ಕುತ್ತಿಗೆಗೆ ಬಿಗಿಯಾಗಿ ಅವಚಿಕೊಂಡಿದ್ದರಿಂದ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮನೆಯವರು ಬಂದು ನೋಡುವಷ್ಟರಲ್ಲಿ ಬಾಲಕ ಪ್ರಾಣಪಕ್ಷಿ ಹಾರಿಹೋಗಿತ್ತು.
ಘಟನೆಗೆ ಸಂಬಂಧಿಸಿದಂತೆ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಣ್ಣೆದುರೇ ಆಟವಾಡುತ್ತಿದ್ದ ಮಗ ಅತೀ ಸಣ್ಣ ಅಚಾತುರ್ಯದಿಂದ ಸಾವನ್ನಪ್ಪಿರುವುದು ಕುಟುಂಬಸ್ಥರ ಆಕ್ರಂದನಕ್ಕೆ ಕಾರಣವಾಗಿದೆ. ಗ್ರಾಮದಲ್ಲಿ ಮಡುಗಟ್ಟಿದ ಮೌನ ಆವರಿಸಿದೆ.
