ಮಂಗಳೂರು: ಮಂಗಳೂರು ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ (Social Media) ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಕೃತ್ಯಗಳಲ್ಲಿ ತೊಡಗಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಈ ಇಬ್ಬರು ಆರೋಪಿಗಳು ತಲ್ವಾರ್ ಹಿಡಿದು ರೀಲ್ಸ್ (Reels) ಮಾಡಿ, ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ರೀತಿಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದರು. ಡಿಸೆಂಬರ್ 13 ರಂದು ‘Suresh Psy’ ಎಂಬ ಫೇಸ್‌ಬುಕ್ ಖಾತೆಯಲ್ಲಿ ಈ ವಿವಾದಾತ್ಮಕ ವಿಡಿಯೋ ಹರಿದಾಡುತ್ತಿತ್ತು.
ತಲ್ವಾರ್ ಹಿಡಿದು ಡ್ಯಾನ್ಸ್ ರೀಲ್ಸ್ ಮಾಡಿದ್ದ ವ್ಯಕ್ತಿ ಮಂಗಳೂರು ಬಂದರು ನಿವಾಸಿ ಅಮೀರ್ ಸುಹೇಲ್ ಹಾಗೂ ಈ ವಿಡಿಯೋವನ್ನು ತನ್ನ ಫೇಸ್‌ಬುಕ್ ಖಾತೆಯಲ್ಲಿ ಸ್ಟೋರಿ ರೂಪದಲ್ಲಿ ಲೈಕ್ ಮತ್ತು ಹಾರ್ಟ್ ಚಿಹ್ನೆಗಳೊಂದಿಗೆ ಪೋಸ್ಟ್ ಮಾಡಿದ್ದ ಕಾವೂರು ನಿವಾಸಿ ಸುರೇಶ್.
ಈ ಕೃತ್ಯದಿಂದ ಸಾರ್ವಜನಿಕರಲ್ಲಿ ಆತಂಕ ಮತ್ತು ಭಯದ ವಾತಾವರಣ ಸೃಷ್ಟಿಯಾಗಿದೆ ಎಂಬ ಆರೋಪದ ಮೇಲೆ ಕಾವೂರು ಠಾಣೆ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಇಬ್ಬರನ್ನೂ ಬಂಧಿಸಿದ್ದಾರೆ.
ಕಾವೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 352(2), ಬಿಎನ್‌ಎಸ್–2023ರ ಕಲಂ 4 ಮತ್ತು 25(1B), ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಐಟಿ ಕಾಯ್ದೆ ಕಲಂ 11ರ ಅಡಿ ಪ್ರಕರಣ ದಾಖಲಾಗಿದೆ.
