ಕಾರವಾರ(ಉತ್ತರಕನ್ನಡ): ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಅವರು ಮುಂದೆ ಸಿಎಂ ಆಗಿಯೇ ಆಗುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಭವಿಷ್ಯ ನುಡಿದಿದ್ದಾರೆ.
ಅಂಕೋಲಾ ತಾಲ್ಲೂಕಿನ ಆಂದ್ಲೆ ಗ್ರಾಮದ ಜಗದೀಶ್ವರಿ ದೇವಿ ದೇವಸ್ಥಾನಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್‌ರೊಂದಿಗೆ ಆಗಮಿಸಿದ್ದ ಅವರು, ಮಾಧ್ಯಮದವರೊಂದಿಗೆ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, “ಸಿಎಂ ಅವರು ಅಲ್ಲ ಎಂದರೆ ಹೇಳಲು ನಾವ್ಯಾರು? ಅಥವಾ ಹೌದು ಎಂದರೆ ಹೌದು ಎನ್ನಲು ನಾವ್ಯಾರು? ನಮಗೆಲ್ಲ ಹೈಕಮಾಂಡ್ ಇದೆ. ಹೈಕಮಾಂಡ್ ಏನು ನಿಶ್ಚಯ ಮಾಡಿದೆಯೋ ಅದರಂತೆ ಎಲ್ಲವೂ ನಡೆಯುತ್ತದೆ. ಡಿಕೆಶಿ ಅವರು ಗೋಕರ್ಣದಲ್ಲಿ ಮಹಾಬಲೇಶ್ವರ ಮತ್ತು ವಿಘ್ನೇಶ್ವರನ ದರ್ಶನ ಪಡೆದಿದ್ದಾರೆ. ನಾವು ದೇವರನ್ನು ನಂಬಿ ಕೆಲಸ ಮಾಡುವವರು, ದೇವರ ಆಶೀರ್ವಾದದ ಮೇಲೆ ನಂಬಿಕೆ ಇಟ್ಟವರು. ಆದರೆ ಬಿಜೆಪಿಗರು ಕೇವಲ ದೇವರನ್ನು ರಾಜಕೀಯಕ್ಕೆ ಬಳಸಿಕೊಳ್ಳುವವರು” ಎಂದು ವ್ಯಂಗ್ಯವಾಡಿದರು.
ಬೆಳಗಾವಿ ಅಧಿವೇಶನದ ವೇಳೆ ಸಚಿವ ಸತೀಶ್ ಜಾರಕಿಹೊಳಿ ಏರ್ಪಡಿಸಿದ ಔತಣಕೂಟದ ಬಗ್ಗೆ ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆದ ಮಂಕಾಳು ವೈದ್ಯ, “ಸತೀಶ್ ಜಾರಕಿಹೊಳಿ ಅವರ ಊರಿನಲ್ಲಿ ಅಧಿವೇಶನ ನಡೆಯುತ್ತಿದೆ. ಹೀಗಾಗಿ ಎಲ್ಲರೂ ಒಟ್ಟಿಗೆ ಊಟ ಮಾಡೋಣ ಎಂದು ಕರೆದಿದ್ದಾರೆ ಅಷ್ಟೇ. ಇದರಲ್ಲಿ ಯಾವುದೇ ‘ಡಿನ್ನರ್ ಪಾಲಿಟಿಕ್ಸ್’ ಇಲ್ಲ. ಊಟಕ್ಕೆ ಕರೆದರೆ ಅದಕ್ಕೆ ರಾಜಕೀಯ ಬಣ್ಣ ಬಳಿಯುವುದು ಸರಿಯಲ್ಲ. ನಾವು ರೆಸಾರ್ಟ್ ಅಥವಾ ಡಿನ್ನರ್ ಪಾರ್ಟಿ ರಾಜಕಾರಣ ಮಾಡುವವರಲ್ಲ” ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, “ಬಿಜೆಪಿಯವರು ತಮ್ಮ ಅವಧಿಯಲ್ಲಿ ಐದು ವರ್ಷಕ್ಕೆ ಮೂರು ಮುಖ್ಯಮಂತ್ರಿಗಳನ್ನು ಬದಲಾಯಿಸಿದ್ದರು. ಸ್ವತಃ ಯಡಿಯೂರಪ್ಪನವರನ್ನೇ (ಅವರ ಅಪ್ಪನನ್ನೇ) ಪೂರ್ಣಾವಧಿಗೆ ಸಿಎಂ ಕುರ್ಚಿಯಲ್ಲಿ ಕೂರಲು ಬಿಡಲಿಲ್ಲ. ಈಗ ಹೈಕಮಾಂಡ್ ತೀರ್ಮಾನದಂತೆ ನಮ್ಮಲ್ಲಿ ಆಡಳಿತ ನಡೆಯುತ್ತಿದೆ” ಎಂದು ತಿರುಗೇಟು ನೀಡಿದರು.
