S Shorts

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಮಾಸ್ಟರ್ ಪ್ಲಾನ್: ರಾಜ್ಯದಲ್ಲಿ ಶೀಘ್ರದಲ್ಲೇ 579 ಮದ್ಯದಂಗಡಿಗಳ ಇ-ಹರಾಜು

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಮಾಸ್ಟರ್ ಪ್ಲಾನ್: ರಾಜ್ಯದಲ್ಲಿ ಶೀಘ್ರದಲ್ಲೇ 579 ಮದ್ಯದಂಗಡಿಗಳ ಇ-ಹರಾಜು
Author: Meghana Gowda
Posted By: Meghana Gowda
Updated: Jun 27, 2026 | 11:36 AM

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಬಾರ್ ಅಥವಾ ವೈನ್ ಶಾಪ್ ತೆರೆಯಲು ಕಾಯುತ್ತಿದ್ದ ಉದ್ಯಮಿಗಳಿಗೆ ರಾಜ್ಯ ಸರ್ಕಾರವು ಭಾರಿ ಸಿಹಿ ಸುದ್ದಿ ನೀಡಿದೆ. ಬರೋಬ್ಬರಿ 32 ವರ್ಷಗಳ ದೀರ್ಘ ಅವಧಿಯ ಬಳಿಕ, ರಾಜ್ಯದಲ್ಲಿ ನಿಷ್ಕ್ರಿಯವಾಗಿ ಬಿದ್ದಿರುವ ಒಟ್ಟು 579 ಮದ್ಯದಂಗಡಿ ಲೈಸೆನ್ಸ್‌ಗಳನ್ನು (Excise Licenses) ಇ-ಹರಾಜು (E-Auction) ಮಾಡಲು ಅಬಕಾರಿ ಇಲಾಖೆ ಸಂಪೂರ್ಣ ಸಿದ್ಧತೆ ನಡೆಸಿದೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚುವರಿ ಸಂಪನ್ಮೂಲ ಮತ್ತು ಹಣ ಕ್ರೋಢೀಕರಿಸಲು ಈ ಬೃಹತ್ ಹರಾಜು ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಇ-ಹರಾಜು ಪ್ರಕ್ರಿಯೆಯಿಂದ ಸರ್ಕಾರಕ್ಕೆ ಅಂದಾಜು ₹600 ಕೋಟಿಗೂ ಅಧಿಕ ಆದಾಯ ಹರಿದುಬರುವ ನಿರೀಕ್ಷೆಯಿದೆ. ಇಷ್ಟು ದಿನ ಹರಾಜಿಗೆ ಎದುರಾಗಿದ್ದ ಎಲ್ಲಾ ಕಾನೂನು ತೊಡಕುಗಳನ್ನು ಸರ್ಕಾರ ಯಶಸ್ವಿಯಾಗಿ ನಿವಾರಿಸಿದೆ. ಮುಂದಿನ ತಿಂಗಳಿನಿಂದಲೇ ಈ ಇ-ಹರಾಜು ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗುವ ಸಾಧ್ಯತೆಯಿದೆ.

ಈ ಬಾರಿ ಲೈಸೆನ್ಸ್ ಹಂಚಿಕೆಯಲ್ಲಿ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗಿದ್ದು, ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಉದ್ಯಮಿಗಳಿಗೆ ಭರ್ಜರಿ ಮೀಸಲಾತಿ ಕಲ್ಪಿಸಲಾಗಿದೆ. ಪರಿಶಿಷ್ಟ ಜಾತಿಗೆ 72 ಸಿಎಲ್-2 (ಚಿಲ್ಲರೆ ಮದ್ಯ ಮಾರಾಟ ಅಂಗಡಿ) ಮತ್ತು 14 ಸಿಎಲ್-9 (ಬಾರ್ ಅಂಡ್ ರೆಸ್ಟೋರೆಂಟ್) ಲೈಸೆನ್ಸ್‌ಗಳನ್ನು ಮೀಸಲಿಡಲಾಗಿದೆ. ಹಾಗೆಯೇ, ಪರಿಶಿಷ್ಟ ಪಂಗಡಕ್ಕೆ 14 ವೈನ್ ಶಾಪ್ (CL-2) ಹಾಗೂ 3 ಸಿಎಲ್-9 ಲೈಸೆನ್ಸ್‌ಗಳನ್ನು ಕಾಯ್ದಿರಿಸಲಾಗಿದೆ.

ರಾಜ್ಯದಲ್ಲಿ 1992ರ ನಂತರ ಹೊಸದಾಗಿ ಯಾವುದೇ ಸಿಎಲ್-2 ಮತ್ತು ಸಿಎಲ್-9 ಲೈಸೆನ್ಸ್‌ಗಳನ್ನು ಯಾರಿಗೂ ಮಂಜೂರು ಮಾಡಿರಲಿಲ್ಲ. ಪ್ರಸ್ತುತ ರಾಜ್ಯದಲ್ಲಿ ಪ್ರತಿ ವರ್ಷ 3,995 ಸಿಎಲ್-2 ಮತ್ತು ಸಿಎಲ್-9 ಲೈಸೆನ್ಸ್‌ಗಳು ಮಾತ್ರ ನವೀಕರಣಗೊಳ್ಳುತ್ತಿವೆ (Renewal). ಹೀಗಾಗಿ ಮದ್ಯದಂಗಡಿ ಸನ್ನದ್ದುಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಡಿಮ್ಯಾಂಡ್ ಇದ್ದು, ಇ-ಹರಾಜಿನಲ್ಲಿ ಪ್ರತಿ ಲೈಸೆನ್ಸ್ ಕನಿಷ್ಠ 1 ಕೋಟಿಯಿಂದ 3 ಕೋಟಿ ರೂಪಾಯಿಗಳವರೆಗೆ ಹರಾಜಾಗುವ ಅಂದಾಜಿದೆ. ಹರಾಜಾದ ಲೈಸೆನ್ಸ್‌ಗಳ ಮುಂಜೂರಾತಿಯು ಮುಂದಿನ 5 ವರ್ಷಗಳ ಅವಧಿಗೆ ಸಿಗಲಿದೆ ಎಂದು ತಿಳಿದುಬಂದಿದೆ.