S Shorts

ತುಮಕೂರು ಡಿಸಿ ಶುಭಾ ಕಲ್ಯಾಣ್‌ಗೆ ಸಂಕಷ್ಟ: ಜಿಲ್ಲಾಧಿಕಾರಿ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಪರಿಷತ್ ಸಮಿತಿ ನಿರ್ಧಾರ!

ತುಮಕೂರು ಡಿಸಿ ಶುಭಾ ಕಲ್ಯಾಣ್‌ಗೆ ಸಂಕಷ್ಟ: ಜಿಲ್ಲಾಧಿಕಾರಿ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಪರಿಷತ್ ಸಮಿತಿ ನಿರ್ಧಾರ!
Author: Meghana Gowda
Posted By: Meghana Gowda
Updated: Jun 27, 2026 | 10:26 AM

ತುಮಕೂರು: ಜಿಲ್ಲೆಯ ವಿಧಾನ ಪರಿಷತ್ ಸದಸ್ಯರನ್ನು ನಿರಂತರವಾಗಿ ಕಡೆಗಣಿಸಿ, ಶಿಷ್ಟಾಚಾರ ಉಲ್ಲಂಘನೆ ಮಾಡಿರುವ ಆರೋಪ ಎದುರಿಸುತ್ತಿರುವ ತುಮಕೂರು ಜಿಲ್ಲಾಧಿಕಾರಿ (DC) ಶುಭಾ ಕಲ್ಯಾಣ್ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ವಿಧಾನ ಪರಿಷತ್ ಹಕ್ಕುಬಾಧ್ಯತಾ ಸಮಿತಿ ಮಹತ್ವದ ನಿರ್ಧಾರ ಕೈಗೊಂಡಿದೆ. ಇತ್ತ ಜನಪ್ರತಿನಿಧಿಗಳಿಗೂ, ಅತ್ತ ಸಮಿತಿಗೂ ಗೌರವ ನೀಡದ ಜಿಲ್ಲಾಧಿಕಾರಿಯ ನಡೆ ಈಗ ತೀವ್ರ ವಿವಾದಕ್ಕೆ ಈಡುಮಾಡಿದೆ.

ಬಿಜೆಪಿಯ ಪರಿಷತ್ ಸದಸ್ಯ ಎಂ. ಚಿದಾನಂದ ಗೌಡ ಹಾಗೂ ಕಾಂಗ್ರೆಸ್ ಎಂಎಲ್‌ಸಿ ರಮೇಶ್ ಬಾಬು ಅವರಿಗೆ ಜಿಲ್ಲಾಡಳಿತ ನಿರಂತರವಾಗಿ ಅಗೌರವ ತೋರುತ್ತಿದೆ ಎಂದು ಆರೋಪಿಸಲಾಗಿದೆ. ಸರ್ಕಾರದ ಯಾವುದೇ ಕಾರ್ಯಕ್ರಮಗಳಿಗೆ ಶಿಷ್ಟಾಚಾರದ ಪ್ರಕಾರ ಇವರನ್ನು ಆಹ್ವಾನಿಸುತ್ತಿಲ್ಲ ಹಾಗೂ ಆಹ್ವಾನ ಪತ್ರಿಕೆಗಳಲ್ಲಿ ಉದ್ದೇಶಪೂರ್ವಕವಾಗಿ ಎಂಎಲ್‌ಸಿಗಳ ಹೆಸರನ್ನು ಕೈಬಿಡಲಾಗುತ್ತಿದೆ. ಅಷ್ಟೇ ಅಲ್ಲದೆ, ಪರಿಷತ್ ಸದಸ್ಯರು ಕರೆ ಮಾಡಿದರೂ ಡಿಸಿ ಸ್ವೀಕರಿಸುತ್ತಿಲ್ಲ, ಕನಿಷ್ಠ ಸೌಜನ್ಯಕ್ಕೂ ಮರು ಕರೆ (Callback) ಮಾಡುತ್ತಿಲ್ಲ ಎಂದು ಬೇಸತ್ತು ಸದಸ್ಯರು ಹಕ್ಕುಬಾಧ್ಯತಾ ಸಮಿತಿಗೆ ದೂರು ನೀಡಿದ್ದರು.

ದೂರಿನ ಅನ್ವಯ ಖುದ್ದು ವಿಚಾರಣೆಗೆ ಹಾಜರಾಗುವಂತೆ ಹಕ್ಕುಬಾಧ್ಯತಾ ಸಮಿತಿಯು ಏಪ್ರಿಲ್ 9, ಮೇ 29, ಜೂನ್ 5 ಮತ್ತು ಜೂನ್ 12 ರಂದು ಸತತ ನಾಲ್ಕು ಬಾರಿ ನೋಟಿಸ್ ನೀಡಿದ್ದರೂ ಜಿಲ್ಲಾಧಿಕಾರಿ ಹಾಜರಾಗಿರಲಿಲ್ಲ. ತದನಂತರ ಜೂನ್ 19 ರಂದು ಮತ್ತೊಮ್ಮೆ ನೋಟಿಸ್ ನೀಡಿದಾಗ, ಕೇವಲ ಪತ್ರದ ಮೂಲಕ ಪ್ರತಿಕ್ರಿಯಿಸಿ ಖುದ್ದು ಹಾಜರಾತಿಯಿಂದ ವಿನಾಯಿತಿ ಕೋರಿದ್ದರು. ಡಿಸಿಯ ಈ ಉಡಾಫೆ ನಡೆಯನ್ನು ಹಕ್ಕುಬಾಧ್ಯತಾ ಸಮಿತಿ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.

ಜಿಲ್ಲಾಧಿಕಾರಿಯ ಈ ವರ್ತನೆಯ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ವಿಧಾನ ಪರಿಷತ್ ಕಾರ್ಯದರ್ಶಿ ಜ್ಯೋತಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ (CS) ಶಾಲಿನಿ ರಜನೀಶ್ ಅವರಿಗೆ ಅಧಿಕೃತ ಪತ್ರ ಬರೆದಿದ್ದಾರೆ. ಅಲ್ಲದೆ, ಮುಂಬರುವ ಜಂಟಿ ಅಧಿವೇಶನದಲ್ಲಿ ಡಿಸಿ ಶುಭಾ ಕಲ್ಯಾಣ್ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಸಮಿತಿ ನಿರ್ಧರಿಸಿದೆ.

ಕಳೆದ ಮೂರು ವರ್ಷಗಳಿಂದ ತುಮಕೂರು ಜಿಲ್ಲೆಯಲ್ಲೇ ಠಿಕಾಣಿ ಹೂಡಿರುವ ಡಿಸಿ ಶುಭಾ ಕಲ್ಯಾಣ್ ಅವರು ಜನಸಾಮಾನ್ಯರ ಸಮಸ್ಯೆಗಳಿಗೂ ಸ್ಪಂದಿಸುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದರಿಂದ ಬೇಸತ್ತಿದ್ದ ಸಾರ್ವಜನಿಕರು ಇತ್ತೀಚೆಗಷ್ಟೇ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, “ಡಿಸಿ ಬೇಗ ವರ್ಗಾವಣೆಯಾಗಲಿ” ಎಂದು ದೇವರಲ್ಲಿ ಹರಕೆ ಹೊತ್ತಿದ್ದರು. ಸಾರ್ವಜನಿಕರು ಹರಕೆ ಹೊತ್ತ ಬೆನ್ನಲ್ಲೇ ಈಗ ಜಿಲ್ಲಾಧಿಕಾರಿ ವಿರುದ್ಧ ಹಕ್ಕುಚ್ಯುತಿ ಅಸ್ತ್ರ ಪ್ರಯೋಗವಾಗುತ್ತಿರುವುದು ಜಿಲ್ಲೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.